ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕ ಮಂಗಳೂರು ಮತ್ತು ಗುರು ಎಜುಕೇಶನ್ ಟ್ರಸ್ಟ್ (ರಿ) ಇವರ ಸಂಯುಕ್ತ ಆಶ್ರಯದಲ್ಲಿ “ರಾಷ್ಟ್ರಿಯ ನೇತ್ರ ದಾನ ಅರಿವು ಕಾರ್ಯಕ್ರಮ”ವನ್ನು 09/09/2024 ರಂದು ಪೂರ್ವಾಹ್ನ ಶ್ರೀ ಸರಸ್ವತಿ ವಿದ್ಯಾನಿಕೇತನ,ಕನ್ಯಾನ ಬಂಟ್ವಾಳ ತಾಲೂಕು ಸಭಾಭವನದಲ್ಲಿ ಆಚರಿಸಲಾಯಿತು .
ದೃಷ್ಟಿಹೀನರ ಸ್ಥಿತಿಯನ್ನು ಅರ್ಥಮಾಡಿಸಿಕೊಳ್ಳುವ ಚಟುವಟಿಕೆಯ ಅಂಗವಾಗಿ ಒಬ್ಬನ ಕಣ್ಣಿಗೆ ಬಟ್ಟೆಯನ್ನು ಕಟ್ಟಿ ಮತ್ತೊಬ್ಬನ ಸಹಾಯದಿಂದ ಮುನ್ನಡೆಯುದರ ಜೊತೆಗೆ ಘೋಷಣಾ ಫಲಕಗಳನ್ನು ಪ್ರದರ್ಶಿಸುವ ಮೂಲಕ ಬ್ಲೈಂಡ್ ವಾಕಥಾನ್ ನಡೆಸಲಾಯಿತು . ವಿದ್ಯಾರ್ಥಿಗಳು ಪ್ರಬಂಧ , ಭಾಷಣ ಸ್ಪರ್ಧೆಯ ಮೂಲಕ ಮತ್ತು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಮಡಕೆಯನ್ನು ಒಡೆಯುವ ಸ್ಪರ್ಧೆಯ ಮೂಲಕ ನೇತ್ರದಾನದ ಮಹತ್ವ ಹಾಗೂ ಜೀವನದಲ್ಲಿ ಕಣ್ಣಿನ ಮಹತ್ವವನ್ನು ಅರಿತುಕೊಳ್ಳುವ ಚಟುವಟಿಕೆಗಳನ್ನು ನಡೆಸಲಾಯಿತು .
ಸಭಾ ಕಾರ್ಯಕ್ರಮವನ್ನು ವಿದ್ಯಾರ್ಥಿಗಳ ಪಾರ್ಥನೆಯೊಂದಿಗೆ ಆರಂಭಿಸಲಾಯಿತು.ಸಕ್ಷಮ ದ.ಕ ಜಿಲ್ಲಾ ಘಟಕದ ಕಾರ್ಯದರ್ಶಿ ಹರೀಶ್ ಪ್ರಭು ರವರು ಕಾರ್ಯಕ್ರಮಕ್ಕೆ ಸ್ವಾಗತಿಸಿದರು . ಸಕ್ಷಮ ದ.ಕ.ಜಿಲ್ಲಾ ಘಟಕದ ಖಜಾಂಜಿ ಶ್ರೀ ಸತೀಶ್ ರಾವ್ ರವರು ವಿಶೇಷ ಚೇತನ ಮಕ್ಕಳಿಂದ ತಯಾರಿಸಿದ ಹೂಗಳನ್ನು ಕೊಡುವುದರ ಮೂಲಕ ಗಣ್ಯರನ್ನು ಗೌರವಿಸಿದರು. ಬಳಿಕ ದೀಪ ವನ್ನು ಪ್ರಜ್ವಲನೆಗೊಳಿಸುವ ಮೂಲಕ ಶ್ರೀ ಸರಸ್ವತಿ ವಿದ್ಯಾಲಯದ ಸಂಚಾಲಕರಾದ ಈಶ್ವರ ಪ್ರಸಾದ ರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು . ಸಕ್ಷಮ ದ.ಕ ಜಿಲ್ಲಾ ಘಟಕದ ಉಪ ಕಾರ್ಯದರ್ಶಿಗಳಾದ ಶ್ರೀ ಭಾಸ್ಕರ ಹೊಸಮನೆ ಯವರು ಸ್ವಾಮಿ ವಿವೇಕಾನಂದರ ಅಮೃತ ವಚನದೊಂದಿಗೆ ಸಕ್ಷಮ ಗೀತೆಯನ್ನು ಹಾಡಿದರು. ಸಕ್ಷಮ ದ.ಕ. ಜಿಲ್ಲಾ ಘಟಕದ ಉಪಾದ್ಯಕ್ಶರೂ ‘ ವಿಕಾಸಂ ಫೌಂಡೇಶನ್’ ಇದರ ಸಂಸ್ಥಾಪಕರು ಆದ ಶ್ರೀ ಗಣೇಶ್ ಭಟ್ ವಾರಾಣಸಿ ‘ಸಕ್ಷಮ ‘ಸಂಸ್ಥೆಯ ದ್ಯೇಯ ಮತ್ತು ಉದ್ದೇಶಗಳ ಪರಿಚಯವನ್ನು ನೀಡುತ್ತಾ , ಚಿತ್ರಕಲೆಯಲ್ಲಿ ರಾಷ್ಟ್ರಮಟ್ಟದ ಗೌರವಕ್ಕೆ ಪಾತ್ರರಾಗಿರುವ ದಿವ್ಯಾಂಗ ಚೇತನ ಕು|ಸುಧಾರತ್ನ ಇವರ ಸಾಧನೆಯನ್ನು ಸಭೆಗೆ ವಿವರಿಸಿದರು .ಬಳಿಕ ಕು|ಸುಧಾರತ್ನರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಥಮ ,ದ್ವಿತೀಯ,ತೃತೀಯ ಬಹುಮಾನವನ್ನು ಪ್ರಶಸ್ತಿ ಪತ್ರದೊಂದಿಗೆ ಗಣ್ಯರಿಂದ ವಿತರಿಸಲಾಯಿತು ಹಾಗೆಯೇ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲಾಸ್ಪರ್ದಿಗಳಿಗೆ ಪ್ರೋತ್ಸಾಹಕ ಬಹುಮಾನ ಪ್ರಶಸ್ತಿ ಪತ್ರದೊಂದಿಗೆ ವಿತರಿಸಲಾಯಿತು.
ದಿವ್ಯಾಂಗ ಚೇತನ ರನ್ನು ಸಮಾಜಕ್ಕೆ ಜೊತೆ ಜೊತೆಯಾಗಿ ಮುನ್ನಡೆಸುವ ಕಾರ್ಯದಲ್ಲಿ ಸಕ್ಷಮ ದ.ಕ.ಜಿಲ್ಲಾ ಘಟಕವು ಮಾಡುತಿರುವ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದ ಉದ್ಘಾಟಕರಾದ ಶ್ರೀ ಸರಸ್ವತಿ ವಿದ್ಯಾಲಯ ಕನ್ಯಾನ ಇದರ ಸಂಚಾಲಕರಾದ ಶ್ರೀ ಈಶ್ವರ ಪ್ರಸಾದರು ಮಕ್ಕಳಲ್ಲಿ ನೇತ್ರದಾನದ ಅರಿವು ಮೂಡಿಸುವುದರ ಮೂಲಕ ಸಮಾಜದಲ್ಲಿ ದಿವ್ಯಾಂಗ ಚೇತನರು ಕೂಡ ತಮ್ಮಂತೆಯೇ ಎಂದು ಪರಿಗಣಿಸಿ ನೇತ್ರದಾನಕ್ಕಾಗಿ ಅರಿವು ಮೂಡಿಸುವ ಈ ಕಾರ್ಯವನ್ನು ಪ್ರೋತ್ಸಾಹಿಸುತ್ತಿದ್ದೇನೆ ಎಂದರು.
ಶ್ರೀ ಸರಸ್ವತಿ ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ಮಧುರಾ ಈಶ್ವರ ಪ್ರಸಾದರು ಮುಖ್ಯ ಅತಿಥಿಗಳಾಗಿ ‘ಸಕ್ಷಮ’ ದ ಮೂಲಕ ಮಕ್ಕಳಲ್ಲಿ ನೇತ್ರದಾನದ ಮಹತ್ವವನ್ನು ಮೂಡಿಸುವ ದೃಷ್ಟಿಯಲ್ಲಿ ಕೈಕೊಂಡಿರುವ ಚಟುವಟಿಕೆಗಳನ್ನು ಪ್ರಶಂಶಿಸಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು .
ಸಭಾಧ್ಯಕ್ಷತೆಯನ್ನು ವಹಿಸಿದ್ದ ‘ಸಕ್ಷಮ’ದ.ಕ.ಜಿಲ್ಲಾ ಘಟಕದ ಅಧ್ಯಕ್ಷರಾದ ರಾಜಶೇಖರ ಭಟ್ ಕಾಕುಂಜೆ ಯವರು ಮಕ್ಕಳ ಮನದಲ್ಲಿ ‘ಕಷ್ಟ ‘ಎನ್ನುವ ಪದದ ಮೂಲಕ ಎಲ್ಲದರಿಂದಲೂ ಹಿಂದೆ ಸರಿಯುವ ಪ್ರವೃತಿ ಯನ್ನು ಬಿಟ್ಟು ಇದು ಸಾಧ್ಯ ಎನ್ನುವ ಮನೋವೃತಿಯನ್ನು ಬೆಳೆಸಿಕೊಳ್ಳಬೇಕು .ಇಲ್ಲವಾದರೆ ಇಂದು ದಿವ್ಯಾಂಗ ಚೇತನರಾದ ಕು|ಸುಧಾರತ್ನ ಏನನ್ನು ಸಾಧಿಸಲಾಗುತಿರಲಿಲ್ಲ .ಅವರಲ್ಲಿನ ದೃಢತೆ ಅವರನ್ನು ಚಿತ್ರಕಲೆಯ ಮೂಲಕ ಸಮಾಜವೇ ಗುರುತಿಸಿಕೊಳ್ಳುವಂತೆ ಮಾಡಿರುವ ಸಾಧನೆ ನಮಗೆಲ್ಲ ಆದರ್ಶಪ್ರಾಯವಾಗಿದೆ .ಅಸಾಧ್ಯವನ್ನು ಸಾಧಿಸಿಕೊಳ್ಳುವ ಛಲ ,ದೃಢ ನಿಶ್ಚಯ ಗಳ ಮೂಲಕ ಸಾಧನಾ ಪಥದಲ್ಲಿ ಅವರು ಮುನ್ನಡೆಯುತಿದ್ದರಿಂದ ಗೌರವಕ್ಕೆ ಪಾತ್ರರಾಗಿದ್ದಾರೆ . ಅದೇರೀತಿ ನೇತ್ರ ಹೀನ ದಿವ್ಯಾಂಗರೂ ಇಂದು ತಮ್ಮ ಸಾಧನೆಯನ್ನು ಸಮಾಜಕ್ಕೆ ತೋರಿಸಿಕೊಟ್ಟು ಹಲವು ದಿವ್ಯಾಂಗ ಚೇತನರಿಗೆ ಜೀವನವನ್ನು ಕಲ್ಪಿಸಿಕೊಟ್ಟಿದ್ದಾರೆ . ಆದರೆ ಅವರು ಬೆಳಕನ್ನು ಕಂಡಿಲ್ಲ .ಇಂಥವರುಬೆಳಕು ಕಾಣುವಂತಾಗಿದ್ದರೆ ಇನ್ನಷ್ಟು ಸಾಧನೆಗಳನ್ನು ಮಾಡಬಹುದಿತ್ತೆನೋ .ನಮ್ಮಂತೆ ಅವರು ಬೆಳಕನ್ನು ಕಾಣುವಂತಾಗಬೇಕು . ಅದಕ್ಕಾಗಿ ಸತ್ತ ಬಳಿಕ ಮಣ್ಣಲ್ಲಿ ಮಣ್ಣಾಗಿ ಹೋಗುವ ಶರೀರದ ಅಂಗವಾದ ನೇತ್ರ ದಾನವನ್ನು ಮಾಡಬೇಕು . ಬೆಳಕನ್ನು ಕಾಣದವರು ಬೆಳಕನ್ನು ಕಾಣುವಂತೆ ಮಾಡುವ ಈ ನೇತ್ರದಾನದ ಮೂಲಕ ಮರಣದ ಬಳಿಕ ನಾವು ಜೀವಿತವಾಗಿರಬಹುದಾದಂತಹ ಶ್ರೇಷ್ಠ ಕಾರ್ಯ . ಅದಕ್ಕೆ ಎಲ್ಲರೂ ಮನ ಮಾಡುವ ಕಾರ್ಯವನ್ನು ‘ಸಕ್ಷಮ’ಕೈಕೊಳ್ಳುತ್ತಿದೆ ,ಎಲ್ಲರೂ,ಕೈಜೋಡಿಸುವಂತಾಗಬೇಕು ಎಂದರು .
ಇದೇ ಸಭೆಯಲ್ಲಿ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟ ಶ್ರೀ ಸರಸ್ವತಿ ವಿದ್ಯಾಲಯ ದವರಿಗೆ ದಿವ್ಯಾಂಗ ಕು| ಸುಧಾರತ್ನ ಅವರು ರಚಿಸಿದ ವಿಶೇಷ ಬಣ್ಣದ ಚಿತ್ರಗಳು ಮತ್ತು ಶಾಲಾ ಗ್ರಂಥಾಲಯಕ್ಕೆ ಸ್ವಾಮಿ ವಿವೇಕಾನಂದರ ಕುರಿತಾದ ವಿವಿಧ ವ್ಯಕ್ತಿ ವಿಕಸನ ಪುಸ್ತಕಗಳನ್ನು ಸ್ಮರಣಿಕೆ ರೂಪದಲ್ಲಿಸಕ್ಷಮ ದ.ಕ ಜಿಲ್ಲಾ ಘಟಕದಿಂದ ಹಸ್ತಾಂತರಿಸಲಾಯಿತು.
ವೇದಿಕೆಯಲ್ಲಿ ರಾಜಶೇಖರ ಕಾಕುಂಜೆ , ಗಣೇಶ ಭಟ್ ವಾರಾಣಸಿ ,ಸತೀಶ್ ರಾವ್ , ಹರೀಶ್ ಪ್ರಭು, ಈಶ್ವರ ಪ್ರಸಾದ್ ಮಧುರಾ ಈಶ್ವರ ಪ್ರಸಾದ್, ಉದಯ ಶಂಕರ ನೀರ್ಪಾಜೆ, ಆಡಳಿತ ಮಂಡಳಿ ಸದಸ್ಯರು, ಶ್ರೀ ಭಾರತೀ ಸಮೂಹ ಸಂಸ್ಥೆಗಳು ನಂತೂರು ಮಂಗಳೂರು ,ಸುಧಾರತ್ನ ಉಪಸ್ಥಿತರಿದ್ದರು . ಈ ಕಾರ್ಯಕ್ರಮದಲ್ಲಿ ಸಕ್ಷಮ ದ.ಕ.ಜಿಲ್ಲಾ ಘಟಕದ ಸದಸ್ಯರಾಗಿರುವ ಶ್ಯಾಮಲಾ ಭಟ್ ಕಾಕುಂಜೆ ,ಅನುಷಾ ಭಟ್ ಕಾಕುಂಜೆ , ವೀಣಾ ರಾವ್ ,ನಾರಾಯಣ ಮೂರ್ತಿ ಮತ್ತು ಶಾಲಾ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ,ವಿದ್ಯಾರ್ಥಿಗಳ ಪೋಷಕರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು . ಸುಮಾರು ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಸಕ್ಷಮ ದ.ಕ ಜಿಲ್ಲಾ ಘಟಕದ ಮಹಿಳಾ ಸದಸ್ಯೆಯಾಗಿರುವ ಗೀತಾ ಲಕ್ಷ್ಮೀಶ್ ರವರು ಕಾರ್ಯಕ್ರಮವನ್ನು ನಿರ್ವಹಿಸಿದರು . ಸಕ್ಷಮ ದ.ಕ ಜಿಲ್ಲಾ ಘಟಕದ ಸಹ ಕಾರ್ಯದರ್ಶಿ ಭಾಸ್ಕರ ಹೊಸಮನೆ ವಂದನಾರ್ಪಣೆಗೈದರು . ಶಾಂತಿ ಮಂತ್ರದೊಂದಿಗೆ ಸಭೆ ಮುಕ್ತಾಯಗೊಂಡಿತು .