ದಾವಣಗೆರೆ : ಮಕ್ಕಳು ಪರೀಕ್ಷೆಯ ಭಯಬಿಟ್ಟು ಮುಂದಿನ ಜೀವನದ ಸಾಧನೆ ಭದ್ರವಾದ ಬುನಾದಿ ಹಾಕಲು ಈಗಿನಿಂದಲೇ ಮಾನಸಿಕವಾಗಿ ಸಿದ್ಧತೆಯಿಂದ ಹಬ್ಬದ ಸಂಭ್ರಮದಂತೆ ಪರೀಕ್ಷೆ ಎದುರಿಸಿ ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸದ ಹಂತ ಶಿಕ್ಷಣ ಮತ್ತು ಜೀವನದ ತಿರುವು. ಪ್ರತೀ ವರ್ಷ ಎಸ್.ಎಸ್.ಎಲ್.ಸಿ. ಫಲಿತಾಂಶ ದಾವಣಗೆರೆ ಜಿಲ್ಲೆ 15ರಿಂದ19ನೇ ಸ್ಥಾನಕ್ಕೆ ಹೋಗುತ್ತಿರುವುದು ವಿಷಾದದ ಸಂಗತಿ. ಈ ವರ್ಷವಾದರೂ ಈ ಜಿಲ್ಲೆ ಪ್ರಥಮ ಸ್ಥಾನ ಬರುವ ಹಂತದಲ್ಲೇ ನಮ್ಮ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು ಬದ್ಧತೆಯಿಂದ ಪರೀಕ್ಷೆ ಬರೆದು ಪ್ರಯತ್ನಿಸಬೇಕಾಗಿದೆ ಎಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ತಮ್ಮ ಮನದಾಳದ ಅನಿಸಿಕೆ ಹಂಚಿಕೊಂಡು ಮಕ್ಕಳ ಉತ್ತಮ ಫಲಿತಾಂಶಕ್ಕಾಗಿ ಪ್ರತಿಜ್ಞಾವಿಧಿ ಬೋಧಿಸಿದರು. ದಾವಣಗೆರೆಯ ಡಿ.ಸಿ.ಎಂ. ಟೌನ್‌ಶಿಪ್‌ನ ಗೋಲ್ಡನ್ ಪಬ್ಲಿಕ್ ಶಾಲೆಯಲ್ಲಿ ಇತ್ತೀಚಿಗೆ ದಾವಣಗೆರೆಯ ಕಲಾಕುಂಚ ಡಿ.ಸಿ.ಎಂ. ಟೌನ್‌ಶಿಪ್ ಶಾಖೆಯ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ಉಚಿತ ಕಾರ್ಯಾಗಾರ ಉದ್ಘಾಟಿಸಿ ಶೆಣೈಯವರು ಮಾತನಾಡಿದರು. ಎಲ್ಲಾ ವಿಭಾಗದ ಶಿಕ್ಷಕ- ಶಿಕ್ಷಕಿಯರು ಪರೀಕ್ಷೆ ಬರೆಯುವ ಸೂಕ್ತ ಮಾರ್ಗದರ್ಶನ ವಿವರಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಗೋಲ್ಡನ್ ಪಬ್ಲಿಕ್ ಶಾಲೆಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಮಕ್ಕಳಿಗೆ ಉತ್ತಮ ಫಲಿತಾಂಶಕ್ಕಾಗಿ ಶುಭ ಹಾರೈಸಿದರು. ಸ್ವಾತಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಶಿಕ್ಷಕಿ ಪ್ರೇಮಾಬಾಯಿ ಸ್ವಾಗತಿಸಿದರು. ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರಾದ ಮಾಲಾ ಮಂಜುನಾಥ್, ಕಲಾಕುಂಚ ಡಿ.ಸಿ.ಎಂ. ಟೌನ್‌ಶಿಪ್ ಶಾಖೆಯ ಅಧ್ಯಕ್ಷರಾದ ಶಾರದಮ್ಮ ಶಿವನಪ್ಪ, ಹಿರಿಯ ಶಿಕ್ಷಕರಾದ ಮಂಜುನಾಥ್, ಸೋಮಶೇಖರ್, ರೇವಣಸಿದ್ದಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂಕಜ ವಿ.ರಾಜುರವರು
ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಶಿಕ್ಷಕಿ ಸಾಕಮ್ಮ ವಂದಿಸಿದರು.