ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ಜಯನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್.ಗುಡ್ಡೆಕೊಪ್ಪದಲ್ಲಿ ನಕಲಿ ದಾಖಲೆ ಸೃಷ್ಟಿಸುತ್ತಿದ್ದ ವ್ಯಕ್ತಿಯ ಮನೆ ಮೇಲೆ ಹೊಸನಗರ ತಹಶೀಲ್ದಾರ್ ಎಚ್.ಜೆ. ರಶ್ಮಿ ದಾಳಿ ಮಾಡಿದ್ದು, ಈ ವೇಳೆ ವ್ಯಕ್ತಿಯ ಮನೆಯಲ್ಲಿ 48 ನಕಲಿ ಸೀಲ್ ಪತ್ತೆಯಾಗಿವೆ. ಆರೋಪಿ ರಾಜೇಂದ್ರ ಎಂಬಾತ ನಕಲಿ ಹಕ್ಕುಪತ್ರ ತಯಾರಿಸಿ, ಜನರನ್ನು ವಂಚಿಸುತ್ತಿದ್ದ. ಈ ಕುರಿತು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್ ದಾಳಿ ಮಾಡಿದ್ದಾರೆ.
ಈ ವೇಳೆ ಆರೋಪಿಯ ಮನೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್, ಕರ್ಣಾಟಕ ಬ್ಯಾಂಕ್, ಉಪನೊಂದಣಾಧಿಕಾರಿಗಳ ಕಛೇರಿ, ತಹಸೀಲ್ದಾರ್, ತಾಲೂಕು ಕಛೇರಿ, ನ್ಯಾಯಾಲಯ, ವಿವಿಧ ಗ್ರಾಮ ಪಂಚಾಯಿತಿ ಕಛೇರಿಗಳ 48 ವಿವಿಧ ನಕಲಿ ಸೀಲ್ಗಳು, ನೂರಾರು ನಕಲಿ ಹಕ್ಕುಪತ್ರಗಳು, ಹಕ್ಕುಪತ್ರ ಮುದ್ರಿಸುವ ಕಾಗದ ಹಾಗೂ ನಕಲಿ ಸರ್ಕಾರಿ ದಾಖಲೆಗಳು ಸೇರಿದಂತೆ ಹಲವು ದಾಖಲಾತಿಗಳು ಪತ್ತೆಯಾಗಿವೆ. ಈ ಹಿನ್ನಲೆಯಲ್ಲಿ ತಹಶೀಲ್ದಾರ್ ನಕಲಿ ದಾಖಲೆಗಳನ್ನು ವಶಕ್ಕೆ ಪಡೆದು, ಆರೋಪಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.