ಬೆಳಗಾವಿ: ಸುಳ್ಳು ಅತ್ಯಾಚಾರ ಕೇಸು ದಾಖಲಿಸಿದ್ದ ಪ್ರಮುಖ ಆರೋಪಿ ಸೇರಿದಂತೆ 13 ಮಂದಿಯ ವಿರುದ್ಧ ಜೈಲು ಶಿಕ್ಷೆ ಘೋಷಣೆಯಾಗಿದೆ. ಹೆಸ್ಕಾಂ ಅಧೀಕ್ಷಕ ಅಭಿಯಂತರ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಿದ್ದ ಹೆಸ್ಕಾಂ ಸಹಾಯಕ ಅಭಿಯಂತೆ ಸೇರಿ ಒಟ್ಟು 13 ಜನ ಹೆಸ್ಕಾಂ ಅಧಿಕಾರಿಗಳು, ಸಿಬ್ಬಂದಿಗೆ ಮೂರುವರೆ ವರ್ಷ ಜೈಲು ಹಾಗೂ ತಲಾ 86,000 ದಂಡ ವಿಧಿಸಲಾಗಿದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಎಲ್. ವಿಜಯಲಕ್ಷ್ಮಿ ದೇವಿ ಗುರುವಾರ ಈ ಮಹತ್ವದ ತೀರ್ಪು ನೀಡಿದ್ದಾರೆ.
ಮೈಸೂರಿನ ಬೆಸ್ಕಾಂ ಸಹಾಯಕ ಅಭಿಯಂತೆ ಬಿ.ವಿ. ಸಿಂಧು, ಹೆಸ್ಕಾಂ ಸಹಾಯಕ ಲೈನ್‌ಮ್ಯಾನ್ ನಾಥಾಜಿ ಪಾಟೀಲ, ಸಹಾಯಕ ಕಾರ್ಯನಿರ್ವಾಹಕ ಅಭಿಯಂ ಅಜಿತ ಪೂಜಾರಿ, ಹೆಸ್ಕಾಂ ಸಹಾಯಕ ಲೈನ್‌ಮ್ಯಾನ್ ಮಲಸರ್ಜ ಶಹಾಪುರಕರ, ಕಿರಿಯ ಇಂಜಿನಿಯರ್ ಸುಭಾಸ ಹಲ್ಲೋಳ್ಳಿ, ಲೈನ್‌ಮ್ಯಾನ್ ಈರಪ್ಪ ಎಂ. ಪತ್ತಾರ, ಮೆಲ್ವಿಚಾರಕ ಮಲ್ಲಿಕಾರ್ಜುನ ಎಸ್. ರೇಡಿಹಾಳ, ಹಿರಿಯ ಸಹಾಯಕ ಭೀಮಪ್ಪ ಎಲ್. ಗೋಡಲಕುಂದರಗಿ, ಹೆಸ್ಕಾಂ ಸ್ಟೇಶನ್ ಅಟೆಂಡರ್ ಗ್ರೇಡ್ – 2 ರಾಜೇಂದ್ರ ಹಳಿಂಗಳಿ, ಲೆಕ್ಕಾಧಿಕಾರಿ ಸುರೇಶ ಕಾಂಬಳೆ, ಲೈನ್‌ಮ್ಯಾನ್ ಈರಯ್ಯ ಗುರಯ್ಯ ಹಿರೇಮಠ, ಲೈನ್‌ಮ್ಯಾನ್ ಮಾರುತಿ ಭರಮಾ ಪಾಟೀಲ, ಹೆಸ್ಕಾಂ ನಿವೃತ್ತ ಸಹಾಯಕಿ ದಾಕ್ಷಾಯಣಿ ಮಹಾದೇವ ನೇಸರಗಿ ಎಂಬವರಿಗೆ ಮೂರುವರೆ ವರ್ಷ ಶಿಕ್ಷೆ ವಿಧಿಸಿ ತೀರ್ಪು ಹೊರಬಿದ್ದಿದೆ.
2014ರಲ್ಲಿ ಮೊದಲನೇ ಆರೋಪಿ ಬಿ.ವಿ. ಸಿಂಧು ಒಳಸಂಚು ರೂಪಿಸಿ ಮಾಳಮಾರುತಿ ಠಾಣೆಯಲ್ಲಿ ಹೆಸ್ಕಾಂ ಅಧೀಕ್ಷಕ ಅಭಿಯಂತರಾಗಿದ್ದ ತುಕಾರಾಮ್ ಮಜ್ಜಗಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ತನಿಖಾಧಿಕಾರಿಗಳು ಬಿ ರಿಪೋರ್ಟ್ ಸಲ್ಲಿಸಿದ್ದರು. ನಂತರ ದೂರು ಹಿಂಪಡೆಯಲು ಬೆದರಿಕೆ ಹಾಕುತ್ತಿದ್ದಾರೆ ಎಂದು ಸಿಂಧು ಮತ್ತೆ ದೂರು ನೀಡಿದ್ದರು. ಬಳಿಕ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಮನಮೊಂದು ಆತ್ಮಹತ್ಯೆಗೆ ಪ್ರಯತ್ನಿಸಲು ಮಜ್ಜಗಿಯವರೇ ಕಾರಣ ಎಂದು ಮೂರನೇ ದೂರು ನೀಡಿದ್ದರು. ಈ ಕೇಸಿನಲ್ಲಿ ಮಜ್ಜಗಿ 9 ದಿನ ನ್ಯಾಯಾಂಗ ವಶದಲ್ಲಿದ್ದರು.
ಆದರೆ ಪೊಲೀಸರು ತನಿಖೆ ಕೈಗೊಂಡು ಇಂಥ ಯಾವುದೇ ಘಟನೆ ನಡೆದಿಲ್ಲ ಎಂದು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಆರೋಪಿಗಳು ಸುಳ್ಳು ಸಾಕ್ಷಿ ಸೃಷ್ಟಿಸಿ ಮಜ್ಜಗಿ ಅವರನ್ನು ಅಮಾನತುಗೊಳ್ಳುವಂತೆ ಮಾಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಹಿಂದಿನ ಇನ್ಸ್‌ಪೆಕ್ಟರ್ ಚೆನ್ನಕೇಶವ ಟೆಂಗರೀಕರ, ಜಗದೀಶ ಹಂಚಿನಾಳ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಮುರಳೀಧರ ಕುಲಕರ್ಣಿ ವಾದ ಮಂಡಿಸಿದ್ದರು. ಎಲ್ಲಾ ಆರೊಪಿಗಳು ತಪ್ಪಿಸ್ಥರೆಂದು ನ್ಯಾಯಾಲಯ ತೀರ್ಪು ನೀಡಿತ್ತು. ಈಗ ಶಿಕ್ಷೆ ಪ್ರಕಟಗೊಂಡಿದೆ.
ಹೆಸ್ಕಾಂ ಅಧೀಕ್ಷಕ ಅಭಿಯಂತರ ವಿರುದ್ಧ ಸುಳ್ಳು ಅತ್ಯಾಚಾರ ಕೇಸು ಹಾಕಿದ್ದ 13 ಮಂದಿಗೆ ಜೈಲು
RELATED ARTICLES