ಶಿಕ್ಷಣ, ಆರೋಗ್ಯ, ಸಂಘಟನೆಗೆ ಪರಿಣಾಮಕಾರಿ ಕಾರ್ಯಕ್ರಮ: ಶಂಕರ್ ಎ. ಕೋಟ್ಯಾನ್
ಮೂಡುಬಿದಿರೆ : ಯುವವಾಹಿನಿಯ ತತ್ವ, ಉದ್ದೇಶಗಳನ್ನು ಸರಿಯಾಗಿ ಅರಿತು ನಮ್ಮ ಘಟಕದಿಂದ ಶಿಕ್ಷಣ ಆರೋಗ್ಯ, ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಕಳೆದ ಜನವರಿಯಿಂದ ಸುಮಾರು 4 ಲಕ್ಷ ರೂ. ವೆಚ್ಚದಲ್ಲಿ 13 ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಪ್ರಸಕ್ತ ಸಾಲಿನಲ್ಲಿ 83 ಸದಸ್ಯರು ಯುವವಾಹಿನಿಗೆ ಸೇರಿದ್ದಾರೆ ಎಂದು ಯುವವಾಹಿನಿ ಮೂಡುಬಿದಿರೆ ಅಧ್ಯಕ್ಷ ಶಂಕರ್ ಎ.ಕೋಟ್ಯಾನ್ ಹೇಳಿದರು. ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಯುವವಾಹಿನಿ-ಮೂಡುಬಿದಿರೆ ಘಟಕದ ವತಿಯಿಂದ ಹಂಡೇಲು ದೇವಸ ಮನೆಯಲ್ಲಿ ತುಳುನಾಡ ಸಂಸ್ಕೃತಿಯ ಪುನಾರವಲೋಕನ ಧ್ಯೇಯದೊಂದಿಗೆ ನಡೆದ ಕುಟುಂಬ ಸಮ್ಮಿಲನ 2024 ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ದೇವಸ ಮನೆ ಶಿವಾನಂದ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಲಯನ್ಸ್ ಪ್ರಾಂತೀಯ ಮಾಜಿ ಅಧ್ಯಕ್ಷ ನಿತ್ಯಾನಂದ ನಾವರ ಆಶಯ ಮಾತುಗಳನ್ನಾಡಿದರು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಹರೀಶ್ ಕೆ.ಪೂಜಾರಿ, ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ, ಕಂಬಳ ಕೋಣಗಳ ಯಜಮಾನ ಸತೀಶ್ಚಂದ್ರ ಸಾಲ್ಯಾನ್ ಪಾಣಿಲ ಇರುವೈಲು ಮುಖ್ಯ ಅತಿಥಿಗಳಾಗಿದ್ದರು. ಮೂಡುಬಿದಿರೆ ಘಟಕದ ಕೋಶಾಧಿಕಾರಿ ಪ್ರತಿಭಾ ಸುರೇಶ್ ಉಪಸ್ಥಿತರಿದ್ದರು. ದೈವಾರಾಧಕ ಸಾಂತು ಪೂಜಾರಿ ಅಲೈತ್ತಲ್ ಹಂಡೇಲು, ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಶೋ ಸ್ಪರ್ಧಿ ಚೈತನ್ಯ ಹಾಗೂ ಡ್ರಾಮಾ ಜ್ಯೂನಿರ್ಸ್ ಸ್ಪರ್ಧಿ ಅಭೀಷ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಕೇಂದ್ರ ಸಮಿತಿಯ ಜಾಲತಾಣ ನಿರ್ದೇಶಕ ನವಾನಂದ ಸ್ವಾಗತಿಸಿದರು. ಸುಧಾಕರ್ ಅಳಿಯೂರು ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಪ್ರಭಾಕರ್ ಚಾಮುಂಡಿಬೆಟ್ಟ ಹಾಗೂ ಉಷಾ ಮಧುಕರ್ ಸನ್ಮಾನಪತ್ರ ವಾಚಿಸಿದರು. ಮೂಡುಬಿದಿರೆ ಘಟಕದ ಕಾರ್ಯದರ್ಶಿ ಗಿರೀಶ್ ಕೋಟ್ಯಾನ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮನರಂಜನ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಯಿತು.