ಬೆಂಗಳೂರು: ಬೆಂಜ್ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಕೆಂಗೇರಿ ಬಸ್ ನಿಲ್ದಾಣದ ಬಳಿ ನಡೆದಿದೆ. ಫ್ಯಾಷನ್ ಡಿಸೈನರ್ ಸಂಧ್ಯಾ (30) ಮೃತರು.
ಫ್ಯಾಷನ್ ಡಿಸೈನರ್ ಆಗಿರುವ ಸಂಧ್ಯಾ ಅವರು ಬಟ್ಟೆ ಅಂಗಡಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಶನಿವಾರ (ನ.02) ಕೆಲಸ ಮುಗಿಸಿ ರಾತ್ರಿ 7 ಗಂಟೆ ಸುಮಾರಿಗೆ ಕೆಂಗೇರಿ ಬಸ್ ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದರು.
ಈ ವೇಳೆ ಮದ್ಯದ ಮತ್ತಿನಲ್ಲಿ ಬೆಂಜ್ ಕಾರು ಚಲಾಯಿಸಿಕೊಂಡು ಬಂದ ಯುವಕ, ಸಂಧ್ಯಾರಿಗೆ ಡಿಕ್ಕಿ ಹೊಡೆದಿದ್ದಾನೆ. ಕಾರು ಸಂಧ್ಯಾ ಅವರನ್ನು 5 ಮೀಟರ್ ಉಜ್ಜಿಕೊಂಡು ಹೋಗಿದೆ. ಅಪಘಾತದ ರಭಸಕ್ಕೆ ಸಂಧ್ಯಾ ತಲೆಗೆ ತೀವ್ರ ಪೆಟ್ಟಾಗಿ, ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಅಪಘಾತದ ಬಳಿಕ ಯುವಕ ಪರಾರಿಯಾಗಲು ಯತ್ನಿಸಿದ್ದಾನೆ. ಆಗ, ಸ್ಥಳೀಯರು ಯುವಕನನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಸಂಧ್ಯಾರ ಸಹೋದರ ಶೇಖರ್ ಮಾತನಾಡಿ, ನನ್ನ ಅಕ್ಕ ಕೆಂಗೇರಿ ಬಳಿ ದಿಶಾ ಫ್ಯಾಷನ್ ನಲ್ಲಿ ಸ್ಟೋರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಮನೆಗೆ ಬರುತ್ತಿದ್ದರು. ಮನೆಗೆ ಬರುತ್ತಿರುವುದಾಗಿ ಕರೆ ಮಾಡಿ ಸಹ ಹೇಳಿದ್ದರು. ಆದರೆ, 7 ಗಂಟೆ ಸಮಯದಲ್ಲಿ ಪೊಲೀಸರು ಫೋನ್ ಮಾಡಿ “ಮರ್ಸಿಡೆಸ್ ಬೆಂಜ್ ಕಾರು ಡಿಕ್ಕಿ ಹೊಡೆದಿದೆ. ಸಂಧ್ಯಾ ಅವರು ಮೃತಪಟ್ಟಿದ್ದಾರೆ ಅಂತ ಹೇಳಿದರು” ಎಂದು ತಿಳಿಸಿದರು.
ಆರೋಪಿ ಕಡೆಯಿಂದ ಯಾರೊ ಒಬ್ಬರು ಗನ್ ಮೆನ್ ರೀತಿ ಇರುವವರು ನಮ್ಮ ಅಣ್ಣನ ಬಳಿ ಬಂದು ಹಣಕ್ಕೆ ಆಮೀಷ ಒಡ್ಡಿದ್ದಾರೆ. ಕೇಸ್ ಏನು ಬೇಡ, ಎಫ್ ಐಆರ್ ಬೇಡ ನಾವು ಒಂದುವರೆ ಕೋಟಿ ಕೊಡುತ್ತೇವೆ ಎಂದು ಹೇಳಿದ್ದಾರಂತೆ. ಆದರೆ ನಮಗೆ ಹಣ ಏನು ಬೇಡ. ನಮಗೆ ನಮ್ಮ ಅಕ್ಕನ ಸಾವಿಗೆ ನ್ಯಾಯ ಬೇಕು. ಹಣ ಮುಖ್ಯ ಅಲ್ಲ ಅಕ್ಕನ ಜೀವ ಮುಖ್ಯ. ನಾವು ಕಾನೂನು ಮೂಲಕ ಹೋರಾಟ ಮಾಡುತ್ತೇವೆ ಎಂದು ಸಂಧ್ಯಾ ಸಹೋದರ ಹೇಳಿದರು.