ಶಿರ್ವ: ವಿಶ್ವದ ಎರಡನೇ ಅತಿ ಎತ್ತರದ ಪ್ರದೇಶವಾದ ಜಮ್ಮು ಕಾಶ್ಮೀರದ ಖರ್ದುಂಗ್ಲಾಕ್ಕೆ ಬೈಕ್‌ನಲ್ಲೇ ಪ್ರಯಾಣಿಸಿದ ಶಿರ್ವದ ಇಬ್ಬರು ಅಪ್ಪ-ಮಗ ಕನ್ನಡ ಬಾವುಟ ಹಾರಿಸಿ ಕನ್ನಡಾಭಿಮಾನ ಮೆರೆದಿದ್ದಾರೆ. ಶಿರ್ವದ ರಾಜೇಂದ್ರ ಶೆಣೈ ಮತ್ತು ಅವರ ಮಗ ಪ್ರಜ್ವಲ್ ಶೆಣೈ ದುರ್ಗಮ ಹಾದಿಯಲ್ಲಿ ಸಾಗಿ ವಿಶ್ವದ ಎರಡನೇ ಅತಿ ಎತ್ತರದ ಪ್ರದೇಶವನ್ನು ತಲುಪಿದ್ದಾರೆ.
ಜೂನ್ ಮೊದಲ ವಾರದಲ್ಲಿ ಬೈಕ್‌ನೊಂದಿಗೆ ಉಡುಪಿಯಿಂದ ರೈಲಿನಲ್ಲಿ ಹೊರಟು ದೆಹಲಿ ತಲುಪಿದ ರಾಜೇಂದ್ರ ಶೆಣೈ ಮತ್ತು ಪ್ರಜ್ವಲ್ ಶೆಣೈ, ಅಲ್ಲಿಂದ ತಮ್ಮ ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್ ಮೂಲಕ ಪ್ರಯಾಣಿಸಿದರು. 10 ದಿನಗಳ ಅವಧಿಯಲ್ಲಿ ಹರ್ಯಾಣ, ಪಂಜಾಬ್, ಹಿಮಾಚಲಪ್ರದೇಶ, ಜಮ್ಮು ಕಾಶ್ಮೀರ ರಾಜ್ಯಗಳನ್ನು ಸುತ್ತಿ ಲೇಹ್ ಲಡಾಕ್, ಕಾರ್ಗಿಲ್, ಮನಾಲಿ ಮೂಲಕ ಖರ್ದುಂಗ್ಲಾಗೆ ಇವರು ಪ್ರಯಾಣಿಸಿದ್ದಾರೆ.
ಬೈಕಿನಲ್ಲೇ ಸುಮಾರು 2,100 ಕಿ.ಮೀ. ಪ್ರಯಾಣ ಬೆಳೆಸಿದ ಇವರು ಸಮುದ್ರ ಮಟ್ಟದಿಂದ 17,982 ಅಡಿ ಎತ್ತರವಿರುವ ವಿಶ್ವದ ಎರಡನೇ ಅತಿ ಎತ್ತರದ ಪ್ರದೇಶವನ್ನು ತಲುಪಿದರು.
ಸಮುದ್ರ ಮಟ್ಟದಿಂದ ಸುಮಾರು 19,024 ಅಡಿ ಎತ್ತರದ ವಿಶ್ವದ ಅತಿ ಎತ್ತರದ ಸ್ಥಳ ಉಮ್ಲಿಂಗ್ಲಾ ತಲುಪಲು ಆಸೆಯಿತ್ತು. ಆದರೆ ಪ್ರತಿಕೂಲ ಹವಾಮಾನ ಹಾಗೂ ಆಕ್ಸಿಜನ್ ಕೊರತೆಯಿಂದ ಸಾಧ್ಯವಾಗಲಿಲ್ಲ ಎಂದು ಪ್ರಜ್ವಲ್ ಶೆಣೈ ಹೇಳಿದ್ದಾರೆ.