ತುಮಕೂರು: ಹೆಣ್ಣುಮಕ್ಕಳಿಗೆ ಅಪ್ಪನೇ ಸೂಪರ್ ಹೀರೋ ಎಂಬ ಮಾತುಗಳಿವೆ. ಆದರೆ ಇಲ್ಲೊಬ್ಬ ಅಪ್ಪ ಎಂಬ ಪದಕ್ಕೇ ಮಸಿ ಬಳಿಯುವ, ಮಣ್ಣು ತಿನ್ನುವ ಕೆಲಸ ಮಾಡಿದ್ದಾನೆ. ತನ್ನ 14 ವರ್ಷದ ಮಗಳ ಮೇಲೆ ಸತತ ಅತ್ಯಾಚಾರ ಎಸಗಿ ಆಕೆಯನ್ನು ಗರ್ಭಿಣಿಯಾಗಿಸಿದ್ದಾನೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಂದೆಯಿಂದಲೇ ಮಗಳ ಮೇಲೆ ನಿರಂತರ ಅತ್ಯಾಚಾರ ನಡೆದಿರುವ ಘಟನೆ ನಡೆದಿದೆ.
ಕೂಲಿ ಕೆಲಸಕ್ಕೆಂದು ಹೊರರಾಜ್ಯದಿಂದ ಬಂದಿದ್ದ ಕುಟುಂಬ ಹೊನ್ನವಳ್ಳಿಯಲ್ಲಿ ನೆಲೆಸಿದೆ. ಇತ್ತೀಚೆಗೆ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ. ತನ್ನ ಮಗಳ ಮೇಲೆಯೇ ತಂದೆ ಅತ್ಯಾಚಾರ ಎಸಗಿರುವುದು ಗೊತ್ತಾಗಿದೆ. ಇದೀಗ ಮಗಳ ಮೇಲೆ ಅತ್ಯಾಚಾರ ಎಸಗಿದ ತಂದೆಯ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ. ಬಾಲಕಿ ಮೂರು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ.