ಉಪ್ಪಿನಂಗಡಿ : ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಈ ಬಾರಿಯೂ ನರೇಂದ್ರ ಮೋದಿಯನ್ನು ಪ್ರಧಾನಿ ಮಾಡುವುದೇ ವಧೂವರರಿಗೆ ನೀಡುವ ಉಡುಗೊರೆ ಎಂದು ಮುದ್ರಿಸಿರುವುದಕ್ಕೆ ವರನ ವಿರುದ್ದ ನೀತಿ ಸಂಹಿತೆ ಜಾರಿ ನಿಗಾ ತಂಡದ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಚುನಾವಣೆ ಮುಗಿದ ಮರುದಿನವೇ ಅಧಿಕಾರಿಗಳು ಪ್ರಕರಣ ದಾಖಲಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕಡಬ ತಾಲೂಕು ಆಲಂತಾಯ ಗ್ರಾಮದ ಶಿವಪ್ರಸಾದ್ ಯಾನೆ ರವಿ ಅವರ ಮದುವೆ ಕಡಬ ತಾಲೂಕು ಹಳೆನೇರಂಕಿ ಗ್ರಾಮದ ಪ್ರಮೀಳಾ ಅವರೊಂದಿಗೆ ಏ.18ರಂದು ಗೋಳಿತೊಟ್ಟು ಸಿದ್ಧಿವಿನಾಯಕ ಕಲಾ ಮಂದಿರದಲ್ಲಿ ನಡೆದಿತ್ತು. ಇವರ ಆಮಂತ್ರಣ ಪತ್ರವನ್ನು ಮಾರ್ಚ್ 1ರಂದು ಮುದ್ರಿಸಲಾಗಿದ್ದು, ಇದರಲ್ಲಿ ‘ಈ ಬಾರಿಯೂ ಮೋದಿಯನ್ನು ಪ್ರಧಾನಿ ಮಾಡುವುದೇ ವಧೂವರರಿಗೆ ನೀಡುವ ಉಡುಗೊರೆ. ಯಾಕೆಂದರೆ ನಮ್ಮ ಭವಿಷ್ಯದ ಭಾರತ ಸುಭದ್ರವಾಗಿರಬೇಕು’ ಎಂದು ಮುದ್ರಿಸಲಾಗಿದೆ.
ಚುನಾವಣಾ ನೀತಿ ಸಂಹಿತೆ ಜಾರಿ ನಿಗಾ ತಂಡದ ಅಧಿಕಾರಿಗಳು ವಧು-ವರರ ಮದುವೆ ಹಾಗೂ ಏ.26ರ ಚುನಾವಣೆ ಮುಗಿದ ಬಳಿಕ ಅಧಿಕಾರಿಗಳು ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದ್ದರು. ಅದರಂತೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮದುವೆ ಆಮಂತ್ರಣ ಮುದ್ರಣವಾಗುವಾಗ ದೇಶದಲ್ಲಿ ಚುನಾವಣೆ ಘೋಷಣೆಯಾಗಿರಲಿಲ್ಲ ಹಾಗೂ ನೀತಿ ಸಂಹಿತೆಯೂ ಜಾರಿಯಲ್ಲಿರಲಿಲ್ಲ. ಅನಂತರ ಮದುವೆಯೂ ಮುಗಿದು ಚುನಾವಣೆಯೂ ಮುಗಿದ ಬಳಿಕ ಕೇಸು ದಾಖಲಿಸಿರುವುದರ ಹಿಂದೆ ಕಾಣದ ಕೈಗಳ ಕೈವಾಡ ಇದೆಯೇ ಎಂಬ ಅನುಮಾನ ಉಂಟಾಗಿದೆ.