ಚಂಡೀಗಢ: ಹರ್ಯಾಣದ ಕುಂಡಲಿ ಮನೇಸರ್ ಪಲ್ವಾಲ್ ಎಕ್ಸ್ ಪ್ರೆಸ್ ವೇನಲ್ಲಿ ಬಸ್ಸೊಂದಕ್ಕೆ ಬೆಂಕಿ ಹೊತ್ತಿಕೊಂಡಿದ್ದರಿಂದ 9 ಮಂದಿ ಸಾವಿಗೀಡಾಗಿದ್ದಾರೆ. ತೀರ್ಥ ಯಾತ್ರೆಗೆ ತೆರಳಿದ್ದವರು ಹಿಂದಿರುಗುತ್ತಿದ್ದಾಗ ಶನಿವಾರ ನಸುಕಿನ ವೇಳೆ ಈ ಅವಘಡ ಸಂಭವಿಸಿದೆ.
ಈ ದುರ್ಘಟನೆಯಲ್ಲಿ 9 ಮಂದಿ ಭಕ್ತರು ಸಜೀವ ದಹನ ಹೊಂದಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಥುರಾ ಮತ್ತು ವೃಂದಾವನಕ್ಕೆ ತೀರ್ಥಯಾತ್ರೆಯಿಂದ ಹಿಂದಿರುಗುವಾಗ ನೂಹ್ ಪ್ರದೇಶದ ಬಳಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಸ್ಸಿನಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 60ಕ್ಕೂ ಹೆಚ್ಚು ಮಂದಿ ಬಸ್ಸಿನಲ್ಲಿದ್ದರು. ಪಂಜಾಬ್ ಮೂಲದ ಇವರು ಹತ್ತು ದಿನ ವಿವಿಧ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಿದ್ದರು. ಬಾಡಿಗೆ ಬಸ್ಸಿನಲ್ಲಿ ಇವರು ಪ್ರಯಾಣಿಸುತ್ತಿದ್ದರು.