ಬಂಟ್ವಾಳ : ಬಂಟ್ವಾಳ ತಾಲೂಕಿನ ಸಂಧೂರು ಗ್ರಾಮದ ಮಧ್ಯ ವಯಸ್ಥರೋರ್ವರು ಡೆಂಗ್ಯೂ ಜ್ವರದಿಂದ ದೇರಳಕಟ್ಟೆ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ. ಇವರು ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ಗರಡಿ ಮನೆ ನಿವಾಸಿಯಾಗಿದ್ದು ಪ್ರಸ್ತುತವಾಗಿ ಕಟಕದಲ್ಲಿ ವಾಸ್ತವ್ಯವಿರುವ ಯತೀಶ್ (50) ಡೆಂಗ್ಯೂ ಜ್ವರಕ್ಕೆ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇದರೊಂದಿಗೆ ದ.ಕ ಜಿಲ್ಲೆಯಲ್ಲೂ ಡೆಂಗ್ಯೂ ಜ್ವರಕ್ಕೆ ಮೊದಲ ಬಲಿ.
ಮೃತರು ಬಿ.ಸಿ.ರೋಡಿನಲ್ಲಿ ಬೀಡಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ಶನಿವಾರ ಮೃತಪಟ್ಟ ಯತೀಶ್ ಜ್ವರದಿಂದ ಬಳಲುತ್ತಿದ್ದ ಹಿನ್ನಲೆಯಲ್ಲಿ ಬುಧವಾರದಂದು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಲ್ಲಿ ಅವರನ್ನು ಪರೀಕ್ಷಿಸಿದಾಗ ಡೆಂಗ್ಯೂ ಪಾಸಿಟಿವ್ ಬಂದಿದ್ದು ಸ್ಟೇಟ್ ಲೆಟ್ ಕೌಂಟ್ ತೀರು ಕಡಿಮೆ ಕಂಡುಬಂದಿತ್ತು.
ಈ ಹಿನ್ನಲೆಯಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ದೇರಳಕಟ್ಟೆಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತ ಪಟ್ಟರು. ಮೃತರು ಪತ್ನಿ, ಇಬ್ಬರು ಹೆಣ್ಮಕ್ಕಳು ಸಹಿತ ಬಂಧು ಬಳಗವನ್ನು ಅಗಲಿದ್ದಾರೆ.
ಬಂಟ್ವಾಳ ತಾಲೂಕು ಸೇರಿದಂತೆ ದ.ಕ. ಜಿಲ್ಲೆಯಲ್ಲೂ ಶಂಕಿತ ಡೆಂಗ್ಯೂ ಜ್ವರದಿಂದ ನೂರಾರು ಸಂಖ್ಯೆಯಲ್ಲಿ ಬಳಲುತ್ತಿದ್ದರೂ ಆರೋಗ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮಗಳನ್ನು ಕಾರ್ಯರೂಪಕ್ಕೆ ತಾರದ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ವ್ಯಾಪಿಸಲು ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಬಂಟ್ವಾಳ ತಾಲೂಕಿನಲ್ಲಿ ಆರೋಗ್ಯ ಇಲಾಖೆಯ ಅಂಕಿ ಅಂಶದಂತೆ 168 ಮಂದಿ ಶಂಕಿತ ಡೆಂಗ್ಯೂ ಜ್ವರ ಬಾಧಿತರಿದ್ದು, ಈ ಪೈಕಿ 35 ಮಂದಿಗೆ ದೃಢಪಟ್ಟಿದೆ ಎಂದು ಹೇಳಲಾಗುತ್ತದೆ.