ವಿಜಯಪುರ: ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದು ಐದೇ ವರ್ಷದಲ್ಲಿ ತಮ್ಮ ಆಸ್ತಿಯನ್ನು ದುಪ್ಪಟ್ಟು ಅಥವಾ ಅದಕ್ಕಿಂತಲೂ ಹೆಚ್ಚು ಪಟ್ಟು ಹೆಚ್ಚಿಸಿಕೊಳ್ಳುವುದನ್ನು ಕೇಳುತ್ತಿರುತ್ತೇವೆ. ಆದರೆ ಇಲ್ಲೊಬ್ಬರು ಚುನಾವಣೆ ಗೆಲ್ಲದೆಯೂ ತಮ್ಮ ಆಸ್ತಿಯನ್ನು ನೂರಾರುಪಟ್ಟು ಹೆಚ್ಚಿಸಿಕೊಂಡಿರುವ ಸಂಗತಿಯೊಂದು ವರದಿಯಾಗಿದೆ. ಐದು ವರ್ಷಗಳ ಹಿಂದೆ ಚುನಾವಣೆಗೆ ಸ್ಪರ್ಧಿಸುವಾಗ ಇವರ ಬಳಿ ಇದ್ದದ್ದು ಕೇವಲ 9 ರೂ. ಆದರೆ ಈಗ ಐದು ವರ್ಷಗಳ ನಂತರ ಇವರ ಬಳಿ 108 ಕೋಟಿ ರೂಪಾಯಿ ಮೌಲ್ಯದ ಆಸ್ತಿಯಿದೆ. ಇವರ ಪತ್ನಿಯ ಬಳಿ 45 ಲಕ್ಷದ ಆಸ್ತಿಯಿದೆ.
52 ಬಾರಿ ಸ್ಪರ್ಧಿಸಿ ದಾಖಲೆ ಹೊಂದಿರುವ ವಿಜಯಪುರದ ಚಡಚಣ ತಾಲೂಕಿನ ಬರಡೊಲ ಗ್ರಾಮದ ದೀಪಕ್ ಗಂಗಾರಾಂ ಕಟಕದೊಂಡ ಹಾಗೂ ಅವರ ಪತ್ನಿ ಕವಿತಾ ದೀಪಕ್ ಕಟಕದೊಂಡ ಅವರು ಸಲ್ಲಿಸಿರುವ ಅಫಿಡವಿಟ್ ನಲ್ಲಿ ಈ ವಿವರ ನೀಡಲಾಗಿದೆ. ವಿಜಯಪುರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಈಗಾಗಲೇ ಸ್ಪರ್ಧಿಸಿರುವ ದಂಪತಿ, ಈಗ ಮಹಾರಾಷ್ಟ್ರದಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾದ ಸೋಲಾಪುರ ಕ್ಷೇತ್ರದಿಂದ ಸ್ಪರ್ಧೆಗಿಳಿದಿದ್ದಾರೆ. ದೀಪಕ್ ಹಿಂದುಸ್ತಾನ್ ಜನತಾ ಪಕ್ಷದಿಂದ ಸ್ಪರ್ಧಿಸಿದ್ದರೆ, ಪತ್ನಿ ರಾಣಿ ಚನ್ನಮ್ಮ ಪಕ್ಷದಿಂದ ಸ್ಪರ್ಧಿಸಿದ್ದಾರೆ.
ಪತಿ-ಪತ್ನಿ ಇಬ್ಬರೂ ಎರಡು ಕ್ಷೇತ್ರಗಳಲ್ಲಿ ಜೊತೆಯಾಗಿ ಹಾಗೂ ಪ್ರತ್ಯೇಕ ಪಕ್ಷಗಳಿಂದ ಸ್ಪರ್ಧಿಸುತ್ತಿದ್ದಾರೆ. ಇವರ ಬಳಿ ಇಷ್ಟುದೊಡ್ಡ ಮೊತ್ತದ ಆಸ್ತಿಯಿದ್ದು ಎಲ್ಲವೂ ಸಾಲದಿಂದಲೇ ಆಗಿದೆ ಎನ್ನಲಾಗಿದೆ. ದಾನಿಗಳ ದೇಣಿಗೆಯಿಂದ ಇವರು ವಿಶ್ವದಲ್ಲೇ ಅತಿ ಎತ್ತರದ ವೆಂಕಟೇಶ್ವರ ಮೂರ್ತಿ ಸ್ಥಾಪಿಸಲು ಮುಂದಾಗಿದ್ದಾರೆ ಎಂದೂ ಹೇಳಲಾಗಿದೆ.