ಮೈಸೂರು: ಕಾಡಾನೆ ದಾಳಿಗೆ ದಸರಾ ಆನೆ ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಂಭವಿಸಿದೆ. 39 ವರ್ಷದ ಗೋಪಾಲಸ್ವಾಮಿ ಮೃತ ಆನೆ. ಅರಣ್ಯದಲ್ಲಿ ಮೇಯಲು ಬಿಟ್ಟಿದ್ದ ವೇಳೆ ಕಾಡಾನೆ ದಾಳಿ ನಡೆಸಿದ್ದು, ಕಾಲು, ಹೊಟ್ಟೆ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಅರಣ್ಯ ಇಲಾಖೆ ವೈದ್ಯರು ಚಿಕಿತ್ಸೆ ನೀಡಿದರೂ, ಫಲಿಸದೆ ಬುಧವಾರ ಮಧ್ಯಾಹ್ನ ಕೊನೆಯುಸಿರೆಳೆದಿದೆ. ಹುಣಸೂರು ತಾಲೂಕಿನ ನೇರಳಕುಪ್ಪೆ ಬಿ ಹಾಡಿ ಶಿಬಿರದಲ್ಲಿ ಗೋಪಾಲಸ್ವಾಮಿ ಆನೆ ಇತ್ತು. ಡಿಸಿಎಫ್ ಹರ್ಷಕುಮಾರ್ ನೇತೃತ್ವದಲ್ಲಿ ಅಂತ್ಯ ಸಂಸ್ಕಾರ ನೆರವೇರಿತು. ಈ ಬಾರಿಯ ದಸರಾದಲ್ಲಿ ಗೋಪಾಲಸ್ವಾಮಿ ಮರದ ಅಂಬಾರಿ ಹೊತ್ತು ಗಮನ ಸೆಳೆದಿದ್ದ.