ಬೆಂಗಳೂರು: ಲೋಕಸಭಾ ಚುನಾವಣೆಗೆ ಮತದಾನಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿರುವಾಗ ಮಾಜಿ ಸಚಿವ , ಕಲಬುರಗಿ ಭಾಗದ ಪ್ರಭಾವಿ ನಾಯಕ ಮಾಲೀಕಯ್ಯ ಗುತ್ತೇದಾರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಗುತ್ತೇದಾರ್ ಕಾಂಗ್ರೆಸ್ ಸೇರಿದರು. ಬಿಜೆಪಿ ನನ್ನನ್ನು ನಡೆಸಿಕೊಂಡ ಬಗ್ಗೆ ನೋವಿದೆ. ಹಿಂದುಳಿದ ವರ್ಗಗಳನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬ ಅನುಭವ ನನಗೆ ಆಗಿದೆ ಎಂದು ಪಕ್ಷ ಸೇರ್ಪಡೆ ಬಳಿಕ ಗುತ್ತೇದಾರ್ ಹೇಳಿದ್ದಾರೆ. ರಾಜ್ಯದ ಉದ್ದಗಲಕ್ಕೂ ಬಿಜೆಪಿ, ಜೆಡಿಎಸ್ ತೊರೆದು ಮುಖಂಡರು ಕಾಂಗ್ರೆಸ್ ಗೆ ಸೇರುತ್ತಿದ್ದಾರೆ. ಷರತ್ತು ಇಲ್ಲದೆ ಪಕ್ಷಕ್ಕೆ ಬರುವವರಿಗೆ ಸ್ವಾಗತ. ಜೆಡಿಎಸ್ ಸಿದ್ಧಾಂತ ಬದಲಾಗುತ್ತಿದೆ. ಹೀಗಾಗಿ ಹಲವು ನಾಯಕರು ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.