ಮಂಗಳೂರು: ತೀವ್ರ ಆರೋಗ್ಯ ಹದಗೆಟ್ಟ ಹಿನ್ನಲೆಯಲ್ಲಿ ಗುರುವಾರ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮನ್‌ಮೋಹನ್ ಸಿಂಗ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮನ್‌ಮೋಹನ್ ಸಿಂಗ್ ಕಳೆದ ಕೆಲವು ತಿಂಗಳುಗಳಿಗೆ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆ ಆಗುತ್ತಿದ್ದರು.
ಗುರುವಾರ ಸಂಜೆಯ ವೇಳೆಗೆ ಆರೋಗ್ಯದಲ್ಲಿ ತೀವ್ರ ಏರುಪೇರು ಆಗಿದ್ದರಿಂದ ಅವರನ್ನು ಏಮ್ಸ್‌ಗೆ ದಾಖಲು ಮಾಡಲಾಗಿತ್ತು. ಈ ಬಗ್ಗೆ ರಾಬರ್ಟ್ ವಾದ್ರಾ ಟ್ವೀಟ್ ಮಾಡಿದ್ದು, “ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಬಗ್ಗೆ ತಿಳಿದು ನನಗೆ ತುಂಬಾ ದುಃಖವಾಗಿದೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಆಳವಾದ ಸಂತಾಪಗಳು. ನಮ್ಮ ದೇಶಕ್ಕೆ ನೀವು ಮಾಡಿದ ಸೇವೆಗೆ ಧನ್ಯವಾದಗಳು. ನಿಮ್ಮ ಆರ್ಥಿಕ ಕ್ರಾಂತಿಗಾಗಿ ನೀವು ಯಾವಾಗಲೂ ನೆನಪಿನಲ್ಲಿರುತ್ತೀರಿ ಮತ್ತು ಪ್ರಗತಿಪರ ಬದಲಾವಣೆಗಳನ್ನು ನೀವು ದೇಶಕ್ಕೆ ತಂದಿದ್ದೀರಿ’ ಎಂದು ಬರೆದುಕೊಂಡಿದ್ದಾರೆ.
ಆದರೆ, ಟ್ವೀಟ್‌ಪೋಸ್ಟ್ ಮಾಡಿದ ಕೆಲ ಹೊತ್ತಿನಲ್ಲಿ ಅದನ್ನು ಡಿಲೀಟ್ ಕೂಡ ಮಾಡಿದ್ದರಾದರೂ, ಇದನ್ನು ಎಎನ್‌ಐ ಪೋಸ್ಟ್ ಮಾಡಿದೆ. ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಕೂಡ ಏಮ್ಸ್ ಆಸ್ಪತ್ರೆಗೆ ಆಗಮಿಸಿದ್ದಾರೆ ಎನ್ನಲಾಗಿದೆ.
1932 ಸೆಪ್ಟೆಂಬರ್ 26ರಂದು ಪಂಜಾಬ್‌ನಲ್ಲಿ ಮನಮೋಹನ್ ಸಿಂಗ್ ಅವರು ಜನಿಸುತ್ತಾರೆ. ಪಂಜಾಬ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಕ್ರಮವಾಗಿ 1952 ಮತ್ತು 1954 ರಲ್ಲಿ ಪಡೆಯುತ್ತಾರೆ.
ಡಾ. ಮನಮೋಹನ್ ಸಿಂಗ್ ಅವರು 1957ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ ತಮ್ಮ ಎಕನಾಮಿಕ್ ಟ್ರಿಪೋಸ್ನ್ನು ಪೂರ್ಣಗೊಳಿಸಿದರು. ಬಳಿಕ 1962 ರಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಪಿಹೆಚ್ಡಿ ಪಡೆದುಕೊಂಡರು. ಬಳಿಕ ರಾಜಕೀಯ ಪ್ರವೇಶ ಮಾಡಿದರು.