Wednesday, February 19, 2025
Homeಮಂಗಳೂರುದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ವಿಶೇಷ ಪ್ರಯತ್ನದ ಫಲ ಸುರತ್ಕಲ್, ಮೂಲ್ಕಿ ರೈಲ್ವೆ ನಿಲ್ದಾಣಗಳ...

ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ವಿಶೇಷ ಪ್ರಯತ್ನದ ಫಲ ಸುರತ್ಕಲ್, ಮೂಲ್ಕಿ ರೈಲ್ವೆ ನಿಲ್ದಾಣಗಳ ಅಭಿವೃದ್ದಿ ಕಾಮಗಾರಿಗಳಿಗೆ ನಾಳೆ ಶಂಕುಸ್ಥಾಪನೆ

ಮಂಗಳೂರು: ಕೊಂಕಣ ರೈಲ್ವೇ ನಿಗಮದ ವ್ಯಾಪ್ತಿಯ ಪ್ರಮುಖ ರೈಲು ನಿಲ್ದಾಣಗಳಾಗಿರುವ ಸುರತ್ಕಲ್ ಮತ್ತು ಮೂಲ್ಕಿ ರೈಲ್ವೆ ಸ್ಟೇಷನ್ಗೆ ಸಂಬಂಧಿಸಿದ ಅಭಿವೃದ್ದಿ ಕಾಮಗಾರಿಗಳ ಶಿಲಾನ್ಯಾಸವನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನಾಳೆ(ಜ.30) ನೆರವೇರಿಸಲಿದ್ದಾರೆ.

ಗುರುವಾರ ಬೆಳಗ್ಗೆ 9.30 ಮತ್ತು 10.30ಕ್ಕೆ ಸುರತ್ಕಲ್ ಹಾಗೂ ಮೂಲ್ಕಿ ರೈಲು ನಿಲ್ದಾಣದಲ್ಲಿ ನಡೆಯುವ ಈ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಂಸದರು ಕಾಮಗಾರಿಗೆ ಅಡಿಗಲ್ಲು ಹಾಕಲಿದ್ದು, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಹಾಗೂ ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಹಾಗೂ ಕೊಂಕಣ ರೈಲು ನಿಗಮದ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಸ್ಥಳೀಯರ ರೈಲು ಬೇಡಿಕೆಗಳಿಗೆ ತುರ್ತು ಸ್ಪಂದಿಸಿದ ಕ್ಯಾ. ಚೌಟ

ಕರಾವಳಿಯ ಎರಡು ಪ್ರಮುಖ ರೈಲ್ವೆ ಸ್ಟೇಷನ್ಗಳಾದ ಸುರತ್ಕಲ್ ಮತ್ತು ಮೂಲ್ಕಿ ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್ ಫಾರ್ಮ್ ಅಭಿವೃದ್ಧಿ ಸೇರಿದಂತೆ ಸೂಕ್ತ ಮೂಲಸೌಕರ್ಯ ಒದಗಿಸಬೇಕೆಂಬುದು ಹಲವು ವರ್ಷಗಳಿಂದ ಸ್ಥಳೀಯರ ಬೇಡಿಕೆಯಾಗಿತ್ತು. ಅಲ್ಲದೆ ಈ ರೈಲು ನಿಲ್ದಾಣಗಳಲ್ಲಿ ಅಗತ್ಯ ಸೌಲಭ್ಯಗಳ ಕೊರತೆಯಿಂದಾಗಿ ಪ್ರಯಾಣಿಕರು ಅದರಲ್ಲಿಯೂ ಸ್ಥಳೀಯರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದರು. ಈ ವಿಚಾರವನ್ನು ಸಂಸದ ಕ್ಯಾ. ಚೌಟ ಅವರ ಗಮನಕ್ಕೆ ತಂದಾಗ ಕೂಡಲೇ ಅವರು ಆ ಬಗ್ಗೆ ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳು ಹಾಗೂ ರೈಲ್ವೆ ಸಚಿವಾಲಯದ ಜತೆಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ನಿರಂತರ ಫಾಲೋಅಪ್ ಮಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ ಇದೀಗ ಬಹು ವರ್ಷಗಳ ಸ್ಥಳೀಯರ ರೈಲ್ವೆ ಬೇಡಿಕೆಗಳನ್ನು ನನಸಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿಕ್ಷಣ ಸಂಸ್ಥೆ ಸಹಿತ ಹಲವು ಕೈಗಾರಿಕೆಗಳಿರುವ ಸುರತ್ಕಲ್ ನಲ್ಲಿ ಲಕ್ಷಾಂತರ ಕಾರ್ಮಿಕರು ಇಲ್ಲಿ ಉದ್ಯೋಗವನ್ನು ಕಂಡುಕೊಂಡಿದ್ದು ಮುಂಬೈ – ಸುರತ್ಕಲ್ ನಡುವೆ ಸ್ಥಳೀಯ ಜನ ಸಂಚಾರವೂ ಇದೆ. ಇವರ ಓಡಾಟಕ್ಕೆ ರೈಲು ಪ್ರಮುಖ ಕೊಂಡಿಯಾಗಿದ್ದು, ಪ್ರವಾಸಿಗರ ದೃಷ್ಟಿಯಿಂದಲೂ ಮಂಗಳೂರಿಗೆ ಹೊಂದಿಕೊಂಡಿರುವ ಸುರತ್ಕಲ್ ನಿಲ್ದಾಣವನ್ನು ಹೆಚ್ಚಿನ ಮಂದಿ ಅವಲಂಬಿಸಿದ್ದಾರೆ.

ಅದರಂತೆ ಇದೀಗ ಸುರತ್ಕಲ್ ರೈಲು ನಿಲ್ದಾಣದಲ್ಲಿ 47.52 ಲಕ್ಷ ರೂ. ವೆಚ್ಚದಲ್ಲಿ ಪ್ಲಾಟ್ ಫಾರ್ಮ್ ಅಭಿವೃದ್ಧಿ(surface) ಹಾಗೂ 1.02 ಕೋಟಿ ರೂ. ವೆಚ್ಚದಲ್ಲಿ ಪ್ಲಾಟ್ ಫಾರ್ಮ್ ಮೇಲ್ಛಾವಣಿ ನಿರ್ಮಾಣದ ಕಾರ್ಯ ನಡೆಯಲಿದೆ. ಇನ್ನು ಕಿಲ್ಪಾಡಿ ಗ್ರಾಂ.ಪಂ ವ್ಯಾಪ್ತಿಗೆ ಬರುವ ಮೂಲ್ಕಿ ನಿಲ್ದಾಣದಲ್ಲಿ
ಹಲವು ರೈಲುಗಳು ನಿಲುಗಡೆಯಾಗುತ್ತಿದ್ದು, ಪ್ರಮುಖ ಜಂಕ್ಷನ್ ಆಗಿರುವ ಈ ನಿಲ್ದಾಣದಲ್ಲಿ 38.58 ಲಕ್ಷ ರೂ. ವೆಚ್ಚದಲ್ಲಿ ಪ್ಲಾಟ್ ಫಾರ್ಮ್ ಅಭಿವೃದ್ಧಿ(surface) ಹಾಗೂ 1.04 ಕೋಟಿ ರೂ. ವೆಚ್ಚದಲ್ಲಿ ಪ್ಲಾಟ್ ಫಾರ್ಮ್ ಮೇಲ್ಫಾವಣಿ ನಿರ್ಮಾಣ ಕಾಮಗಾರಿ ನಡೆಯಲಿದೆ ಎಂದು ಸಂಸದ ಕ್ಯಾ. ಚೌಟ ಅವರು ಇದೇ ವೇಳೆ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular