ಮೂಡುಬಿದಿರೆ: `ಪ್ರಾಂತ್ಯ ಗ್ರಾಮದ ಲಾಡಿಯಲ್ಲಿರುವ ಸುಮಾರು 1300 ವರ್ಷಗಳಷ್ಟು ಹಳೆಯ ಶಿಥಿಲಗೊಂ ಡಿರುವ ಶ್ರೀ ಚತುರ್ಮುಖ ಬ್ರಹ್ಮ ದೇವಳವನ್ನು ಸುಮಾರು 4.64ಕೋ.ರೂ.ವೆಚ್ಚ ದಲ್ಲಿ ಪುನರ್ ನಿರ್ಮಿಸಲಾಗುತ್ತಿದ್ದು ನೂತನಗರ್ಭಗುಡಿಗೆ ಜ.26ರಂದು ಬೆಳಿಗ್ಗೆ, ಗಂಟೆ 9.45ಕ್ಕೆ ಶಿಲಾನ್ಯಾಸ ನಡೆಯಲಿದೆ.
ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎ.ಕೆ. ರಾವ್ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಲಿದ್ದಾರೆ. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅನಂತ ಕೃಷ್ಣರಾವ್ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಉಮಾನಾಥ ಎ. ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಹಿಂದು ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಗುರುಪ್ರಸಾದ್, ಪುರಸಭಾಧ್ಯಕ್ಷ ಪಸಾದ್ ಕುಮಾರ್, ಹೊಸಂಗಡಿ ಅರಮನೆಯ ಸುಕುಮಾರ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ.
ಶಿಲಾಮಯ ಗರ್ಭಗುಡಿ, ತೀರ್ಥ ಮಂಟಪ, ಸುತ್ತು ಪೌಳಿ, ನಾಡುವಿನ ಗುಡಿ, ರಕ್ತೇಶ್ವರೀ ಮಾಡ, ಕೊಡಮಣಿ ತಾಯ ಮಾಡ, ಗಣಪತಿ ಗುಡಿ, ನಾಗ ಬನದ ಜೀರ್ಣೋದ್ಧಾರ, ದೇವಳದ ಕೆರೆ ನಿರ್ಮಾಣ, ಗೋಪುರ, ಬಾವಿ, ಸ್ನಾನದ ಕೊಠಡಿ ಮತ್ತಿತರ ಕಾಮಗಾರಿಗಳು ಹಂತಹಂತ ನಡೆಯಲಿವೆ ಎಂದರು.
ವಾಸ್ತು ಶಿಲ್ಪಿ ಪ್ರಸಾದ್ ಮುನಿಯಂಗಳ, ಶಿಲ್ಪಿ ಪದ್ಮನಾಭ, ಗಣೇಶ್ ರಾವ್, ರವಿಪ್ರಸಾದ್ ಶೆಟ್ಟಿ, ಸದಾನಂದ ಪೂಜಾರಿ, ರಾಘವೇಂದ್ರ ರಾವ್ ಮತ್ತಿತರು ಉಪಸ್ಥಿತರಿದ್ದರು.