ಮೂಡಬಿದಿರೆ: ಶ್ರೀ ಕ್ಷೇತ್ರ ಬನ್ನಡ್ಕ ನೂತನ ಗೋಪುರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮವು ಇಂದು ಬೆಳಿಗ್ಗೆ ಶ್ರೀ ಕ್ಷೇತ್ರ ಬನ್ನಡ್ಕದಲ್ಲಿ ನಡೆಯಿತು. ಜೈನ ಮಠದ ಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳ ಆಶೀರ್ವಾದದೊಂದಿಗೆ ಕ್ಷೇತ್ರ ಬನ್ನಡ್ಕದ ಆಡಳಿತ ಮೊಕ್ತೇಸರಾದ ಸುಕುಮಾರ್ ಬಲ್ಲಾಳ್ರ ನೇತೃತ್ವದಲ್ಲಿ, ಶ್ರೀ ಕ್ಷೇತ್ರ ದ ಅರ್ಚಕರಾದ ಅಸ್ರಣ್ಣ ಭಟ್ಟರಿಂದ ಪೂಜೆ ನೆರವೇರಿತು.
ಶ್ರೀ ಕ್ಷೇತ್ರ ಬನ್ನಡ್ಕದ ಅಭಿವೃದ್ಧಿ, ನಾಗಬ್ರಹ್ಮ ದೇವಸ್ಥಾನ ಮತ್ತು ಬನ್ನಡ್ಕತ್ತಾಯ ದೈವಸ್ಥಾನ ನವೀಕರಣ, ಗೋಮರ ರಚನೆ, ಬನ್ನಡ್ಕತ್ತಾಯಿ ದೈವದ ಮುಂಭಾಗದಲ್ಲಿ ಸ್ವಾಗತ ಗೋಪುರ, ತೀರ್ಥ ಬಾವಿ ರಚನೆ, ಪಟ್ಟದ ಪಂಜುರ್ಲಿ ಗುಡಿ, ಬ್ರಹ್ಮ ದೇವರ ದೇವಸ್ಥಾನದ ಸುತ್ತಲೂ ಪಾದೆಕಲ್ಲು ಹಾಸುವುದು ಹಾಗೂ ದೇವಸ್ಥಾನ ಮತ್ತು ದೈವಸ್ಥಾನದ ಆವರಣಗೋಡೆ ನವೀಕರಣ ಮತ್ತು ಇತರ ಅಭಿವೃದ್ಧಿ ಕಾರ್ಯಕ್ರಮ. ಈ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಸುದರ್ಶನ ಕುಮಾರ್ ಪಾದೂರು ಇವರ ವಾಸ್ತು ಸಲಹೆಯಂತೆ, ಸತೀಶ್ ಭಟ್ ಇವರ ತಾಂತ್ರಿಕ ಸಲಹೆಯಂತೆ ನೀಲಿನಕ್ಷೆ ರಚಿಸಲಾಗಿದೆ.
ಈ ಸಂದರ್ಭದಲ್ಲಿ , ಶಾಸಕ ಉಮಾನಾಥ ಕೋಟ್ಯಾನ್, ಶ್ರೀ ಕ್ಷೇತ್ರ ಬನ್ನಡ್ಕದ ಆಡಳಿತ ಮೊಕ್ತೇಸರಾದ ಸುಕುಮಾರ್ ಬಲ್ಲಾಳ್, ಶ್ರೀ ಕ್ಷೇತ್ರ ಬನ್ನಡ್ಕದ ಸದಸ್ಯರು, ಊರವರು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
‘ ಶ್ರೀ ಕ್ಷೇತ್ರ ಬನ್ನಡ್ಕ’ ಎಂಬ ಕ್ಷೇತ್ರವು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಮೂಡುಬಿದಿರೆ ಸಮೀಪದ ಪಡುಮಾರ್ನಾಡು ಗ್ರಾಮದಲ್ಲಿದೆ. ಈ ಕ್ಷೇತ್ರವು ‘ಜಿನಕಾಶಿ’ ಎಂಬ ಖ್ಯಾತ ನಾಮಧೇಯ ಪಡೆದು 18 ಬಸದಿಗಳಿಂದ ಮೆರೆಯುತ್ತಿರುವ ಮೂಡುಬಿದಿರೆ ಪಟ್ಟಣದಿಂದ 4 ಕಿ.ಮೀ ಉತ್ತರದಲ್ಲಿದೆ. ಶ್ರೀ ಕ್ಷೇತ್ರ ಬನ್ನಡವು 200ಮೀ ಉದ್ದ 100ಮೀ ಅಗಲ ವಿಸ್ತಾರವಾದ ಸಮತಟ್ಟಾದ ಮೈದಾನ ಪ್ರದೇಶದಲ್ಲಿ ಕಂಗೊಳಿಸುತ್ತಿರುವ ಮಹಾಕ್ಷೇತ್ರವಾಗಿದೆ. ಈ ಕ್ಷೇತ್ರ ಪಶ್ಚಿಮ ಭಾಗದಲ್ಲಿ ಆದಿ ಶ್ರೀ ಬ್ರಹ್ಮ ದೇವರ ದೇವಸ್ಥಾನ, ಎಡಗಡೆಯಲ್ಲಿ ಬನ್ನಡ್ಕತ್ತಾಯಿ ದೈವದ ದೈವಸ್ಥಾನ, ದೇವಸ್ಥಾನದ ಆವರಣದಲ್ಲಿ ನಾಗಕ್ಷೇತ್ರದ ಗುಡಿಯೂ ಇದೆ. ಈ ಕ್ಷೇತ್ರದಲ್ಲಿ ಬ್ರಹ್ಮದೇವರು ಹಾಗೂ ಬನ್ನಡ್ಕತ್ತಾಯಿ ದೈವಗಳು ತಮ್ಮ ಕಾರಣಿಕದ ಮಹಾಕ್ಷೇತ್ರವೆನಿಸಿದೆ.