ಬಹ್ರೇಚ್: ತೋಳಗಳ ಭೀಕರ ದಾಳಿಗೆ ಎಂಟು ಮಂದಿ ಬಲಿಯಾಗಿರುವ ಘಟನೆ ಉತ್ತರ ಪ್ರದೇಶದ ಬಹ್ರೇಚ್ ಜಿಲ್ಲೆಯಲ್ಲಿ ನಡೆದಿದೆ. ತೋಳಗಳ ಪತ್ತೆ ಹಾಗೂ ಸೆರೆ ಹಿಡಿಯಲು ಸ್ಥಳೀಯಾಡಳಿತ ಹಾಗೂ ಅರಣ್ಯಾಧಿಕಾರಿಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ತೋಳಗಳ ಓಡಾಟದ ಕುರಿತು ಎಚ್ಚರ ವಹಿಸುವಂತೆ ವಲಯ ಅರಣ್ಯಾಧಿಕಾರಿ (ಡಿಎಫ್‌ಒ) ಅಜಿತ್ ಪ್ರತಾಪ್ ಸೂಚಿಸಿದ್ದಾರೆ.
ಗ್ರಾಮದಲ್ಲಿ ತೋಳದ ಚಲನವಲನವನ್ನು ಡ್ರೋನ್ ಸಹಾಯದಿಂದ ಪತ್ತೆ ಹಚ್ಚಲಾಗಿದೆ. ಹಳ್ಳಿಯಲ್ಲಿರುವ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಎರಡು ತೋಳಗಳನ್ನು ಪತ್ತೆ ಹಚ್ಚಿದ್ದೇವೆ. ಸ್ಥಳಕ್ಕೆ ತೆರಳಿ ಹೆಜ್ಜೆ ಗುರುತುಗಳನ್ನು ಗಮನಿಸಿದ್ದೇವೆ. ಈ ಹಾದಿಯಾಗಿ ಎರಡು ತೋಳಗಳು ಹಾದು ಹೋಗಿರುವುದು ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ. ತೋಳಗಳ ದಾಳಿಯಿಂದಾಗಿ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.