ಮಂಗಳೂರು : ಮೇರಿಹಿಲ್ ನಲ್ಲಿರುವ ಗೃಹರಕ್ಷಕ ದಳ ಜಿಲ್ಲಾ ಕಚೇರಿಯಲ್ಲಿ ಏಪ್ರಿಲ್ 4,2024ನೇ ಗುರುವಾರ ಕಣಚೂರು ಆಯುರ್ವೇದ ಮೆಡಿಕಲ್ ಕಾಲೇಜು ಹಾಗೂ ಗೃಹರಕ್ಷಕ ದಳ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ, ಮಾಹಿತಿ ಹಾಗೂ ಚಿಕಿತ್ಸಾ ಶಿಬಿರವನ್ನು ನಡೆಸಲಾಯಿತು. ಈ ಶಿಬಿರದಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣೆ, ರಕ್ತಹೀನತೆ ತಪಾಸಣೆ, ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣೆ ಸಹಿತ ಇತರ ದೇಹ ಪರೀಕ್ಷೆ ನಡೆಸಿ ಸೂಕ್ತ ಸಲಹೆ ಮತ್ತು ಔಷಧಗಳನ್ನು ಕೊಡಲಾಯಿತು. ಒಳರೋಗಿಯಾಗಿ ಚಿಕಿತ್ಸೆ ಬೇಕಾದವರಿಗೆ ಕಾಲೇಜು ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡುವ ಮಾಹಿತಿ ನೀಡಲಾಯಿತು. ಜಿಲ್ಲಾ ಗೃಹರಕ್ಷಕದಳದ ಮುಖ್ಯ ಅಧಿಕಾರಿ ಡಾ. ಮುರಲಿ ಮೋಹನ ಚೂಂತಾರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಅವರು ಮಾತನಾಡುತ್ತಾ ಗೃಹ ರಕ್ಷಕ ದಳದವರ ತ್ಯಾಗ ಸಹಿತವಾದ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಕಷ್ಟ ಪಟ್ಟು ಜನಹಿತ ಕಾರ್ಯವೆಸಗುವ ತಾವು ತಮ್ಮಆರೋಗ್ಯದ ಬಗ್ಗೆ ಕಾಳಜಿ ವಹಿಸ ಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದರು. ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಹಾಗೂ ಶಸ್ತ್ರ ಚಿಕಿತ್ಸಕ ಡಾ. ಸುರೇಶ ನೆಗಳಗುಳಿ ಆಶಯ ಭಾಷಣ ಮಾಡಿದರು. ಅವರು ಮುಂದುವರಿದು ಕಣಚೂರಿನಲ್ಲಿ ಸ್ಥಾಪಿಸಲಾದ ನೂತನ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯವು ಆಧುನಿಕ ಪದ್ಧತಿಯ ಆಸ್ಪತ್ರೆಯ ಪಕ್ಕದಲ್ಲೇ ಇದ್ದು ಅಗತ್ಯ ಚಿಕಿತ್ಸಗಳಿಗೆ ಅನುಕೂಲಕರವಾಗಿದೆ. ಇಲ್ಲಿ ಎಲ್ಲಾ ರೀತಿಯ ಪಂಚಕರ್ಮ,ಯೋಗ,ಕ್ಷಾರಕರ್ಮ,ಅಗ್ನಿಕರ್ಮ ಚಿಕಿತ್ಸೆಗಳೂ ಲಭ್ಯವಿದ್ದು ಸಾರ್ವಜನಿಕರಿಗೆ ಸದಾ ಸೇವೆ ಮಾಡಲು ತಯಾರಾಗಿದೆ ಎಂದರು. ಉಪ ವೈದ್ಯಕೀಯ ಅಧೀಕ್ಷಕ ಡಾ ಕಾರ್ತಿಕೇಯ ಪ್ರಸಾದ,ವೈದ್ಯರಾದ ವೇದಂ ಆಯುರ್ವೇದ ಮುಖ್ಯಸ್ಥ ಡಾ ಕೇಶವ ರಾಜ್, ಇತರ ವೈದ್ಯರಾದ ಡಾ ಅಂಜಲಿ ಶೇಖರ, ಡಾ ಗಾಯತ್ರಿ ಸಂಜೀವನ್ ಹಾಗೂ ಶುಶ್ರೂಶಕಿಯರಾದ ಅಲ್ವೀರಾ ಪಾಯಸ್,ಎಂಆರ್.ಡಿ ವಿಭಾಗದ ರಶ್ಮಿಕಾ,ಫಾರ್ಮಸಿ ವಿಭಾಗದ ಸಾನಿಯಾ, ಲ್ಯಾಬ್ ಪರೀಕ್ಷಕ ಮಹಮ್ಮದ್ ಶಕೀರಾ, ಸಹಿತ ಪೂರ್ಣ ಸಿಬ್ಬಂದಿಗಳು ಈ ಶಿಬಿರವನ್ನು ನಡೆಸಿಕೊಟ್ಟರು. ಇದಲ್ಲದೇ ಎಲ್ಲಾ ಗೃಹರಕ್ಷಕ ದಳದ ಸಿಬ್ಬಂದಿಯವರಿಗೆ ಉಚಿತ ಮಲೇರಿಯಾ ಪರೀಕ್ಷೆ ಮಾಡಿ,ಸೊಳ್ಳೆ ಪರದೆಗಳನ್ನೂ ಉಚಿತವಾಗಿ ನೀಡಲಾಯಿತು. ಗೃಹರಕ್ಷಕ ದಳದ ಸರ್ವ ಸಿಬ್ಬಂದಿ ಸಹಿತ ನೂರು ಮಂದಿ ಈ ಶಿಬಿರದ ಸದುಪಯೋಗ ಪಡೆದರು.