Wednesday, January 15, 2025
Homeರಾಜಕೀಯಮೋದಿ ಅಕ್ಷಯ ಪಾತ್ರೆಯಿಂದ ಜನತೆಗೆ ಉಚಿತ ಅಕ್ಕಿ, ಕಾಂಗ್ರೆಸ್ ನಿಂದ ಖಾಲಿ ಚೊಂಬು ಮಾತ್ರ :...

ಮೋದಿ ಅಕ್ಷಯ ಪಾತ್ರೆಯಿಂದ ಜನತೆಗೆ ಉಚಿತ ಅಕ್ಕಿ, ಕಾಂಗ್ರೆಸ್ ನಿಂದ ಖಾಲಿ ಚೊಂಬು ಮಾತ್ರ : ಯಶ್ಪಾಲ್ ಸುವರ್ಣ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಆಹಾರ ಭದ್ರತಾ ಕಾಯ್ದೆಯಡಿ ದೇಶದ 80 ಕೋಟಿ ಜನತೆಗೆ 5 ಕೆ.ಜಿ.ಯಂತೆ ಉಚಿತ ಅಕ್ಕಿಯನ್ನು ವಿತರಿಸುತ್ತಾ ಬಂದಿದೆ. ಆ ಮೂಲಕ ಮೋದಿ ಅಕ್ಷಯ ಪಾತ್ರೆಯಿಂದ ಜನತೆಗೆ ಉಚಿತ ಅಕ್ಕಿ ದೊರೆತಂತಾಗಿದೆ. ಆದರೆ ಚುನಾವಣೆಯ ಸಂದರ್ಭದಲ್ಲಿ 10 ಕೆ.ಜಿ. ಉಚಿತ ‘ಅಕ್ಕಿ ಬೇಕೋ ಬೇಡ್ವೊ’ ಎಂದು ಪುಂಗಿ ಊದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಒಂದು ಕಾಳು ಅಕ್ಕಿಯನ್ನೂ ನೀಡದೆ ಜನತೆಗೆ ಖಾಲಿ ಚೊಂಬು ನೀಡಿ ದ್ರೋಹವೆಸಗಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.

ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಉಡುಪಿ ನಗರ ಚುನಾವಣಾ ನಿರ್ವಹಣಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು ಗ್ರಾಮ ಪಂಚಾಯತ್ ಮಟ್ಟದಿಂದ ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನದವರೆಗೆ ಬೆಳೆದು ಬಂದ ಸನ್ನಿವೇಶದಲ್ಲಿ ಸಚಿವರಾಗಿ ಮುಜರಾಯಿ, ಮೀನುಗಾರಿಕೆ, ಬಂದರು, ಒಲನಾಡ ಜಲ ಸಾರಿಗೆ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಲ್ಲಿ ಮಾಡಿರುವ ಜನಪರ ಕಾರ್ಯಗಳ ಸಾಧನೆ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇoದ್ರ ಸರಕಾರದ ಐತಿಹಾಸಿಕ ಸಾಧನೆಗಳನ್ನು ಜನತೆಯ ಮುಂದಿಟ್ಟು ಮತ ಕೇಳಿದರೆ, ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿ ಸರಕಾರದ ಅವಧಿಯ ಸಾಧನೆಗಳನ್ನೇ ತನ್ನ ಸಾಧನೆ ಎಂಬಂತೆ ಬಿಂಬಿಸುತ್ತಾ, ಬಿಜೆಪಿ ಅಭ್ಯರ್ಥಿಯ ತೇಜೋವಧೆಗೈಯುತ್ತಾ ಬಿಟ್ಟಿ ಪ್ರಚಾರ ಪಡೆಯಲು ವಿಫಲ ಯತ್ನ ನಡೆಸುತ್ತಿರುವುದು ಶೋಚನೀಯ ಎಂದು ಅವರು ತಿಳಿಸಿದರು.

ಸಾಮಾನ್ಯ ಬಡ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು ಬಡ ಹಾಗೂ ಶೋಷಿತ ವರ್ಗದ ಕಷ್ಟ ಕಾರ್ಪಣ್ಯಗಳನ್ನು ಚೆನ್ನಾಗಿಯೇ ಅರಿತಿದ್ದಾರೆ. ಸಚಿವರಾಗಿದ್ದ ಸಂದರ್ಭದಲ್ಲಿ ಎಸ್.ಸಿ., ಎಸ್.ಟಿ. ಸಮುದಾಯ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಕೈಗೊಂಡ ಅನೇಕ ಅಭಿವೃದ್ಧಿ ಕೆಲಸ ಕಾರ್ಯಗಳು ಜನ ಮೆಚ್ಚುಗೆಗೆ ಪಾತ್ರವಾಗಿವೆ. ಮುಜರಾಯಿ ಇಲಾಖೆಯ ಮೂಲಕ ಅನೇಕ ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರ, ಗರೋಡಿಗಳ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡಿರುವುದು, ಮೀನುಗಾರಿಕಾ ಇಲಾಖೆಯ ಮೂಲಕ ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳು ಪ್ರಶಂಸೆಗೆ ಪಾತ್ರವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಕೋಟ ಶ್ರೀನಿವಾಸ ಪೂಜಾರಿಯವರ ಕಾರ್ಯ ವೈಖರಿ ಮತ್ತು ಸಾಧನೆಗಳ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಸಾಮಾನ್ಯ ಜನರೊಂದಿಗೂ ಬೆರೆತು ಎಲ್ಲರನ್ನೂ ಸಮಭಾವದಲ್ಲಿ ಕಾಣುವ ಮಾದರಿ ಜನ ನಾಯಕ ಕೋಟ ದಾಖಲೆಯ ಅಂತರದ ಮತಗಳಿಂದ ವಿಜಯಶಾಲಿಯಾಗುವುದು ಶತಸಿದ್ಧ ಎಂದು ಯಶ್ಪಾಲ್ ಸುವರ್ಣ ಹೇಳಿದರು.

ಏ.23 ಮಂಗಳವಾರ ಸಂಜೆ ಗಂಟೆ 4.00ಕ್ಕೆ ಬ್ರಹ್ಮಾವರ ಆಕಾಶವಾಣಿ ಕೇಂದ್ರದ ಬಳಿಯಿಂದ ಬ್ರಹ್ಮಾವರ ಬಸ್ ನಿಲ್ದಾಣದ ವರೆಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾ ಮಲೈಯವರ ಬ್ರಹತ್ ರೋಡ್ ಶೋ ಜರಗಲಿದೆ. ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಶಾಸಕರು ಮತ್ತು ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ. ಪಕ್ಷದ ಕಾರ್ಯಕರ್ತರು ಮತ್ತು ಮತದಾರ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುವಂತೆ ಶಾಸಕ ಯಶ್ಪಾಲ್ ಸುವರ್ಣ ಕೋರಿದ್ದಾರೆ.

ಧರ್ಮಾಧಾರಿತ, ಸಾಂಸ್ಕೃತಿಕ, ವಿಕಸಿತ ಭಾರತಕ್ಕಾಗಿ ಬಿಜೆಪಿ ಬೆಂಬಲಿಸಿ : ಬೈಕಾಡಿ ಸುಪ್ರಸಾದ್ ಶೆಟ್ಟಿ

ಪ್ರಜಾಪ್ರಭುತ್ವದ ಆಶಯ ರಾಮ ರಾಜ್ಯ. ರಾಮ ರಾಜ್ಯ ಸಾಕಾರಗೊಳ್ಳಬೇಕಾದರೆ ಧರ್ಮಾಧಾರಿತ, ಸಾಂಸ್ಕೃತಿಕ, ವಿಕಸಿತ ಭಾರತ ನಿರ್ಮಾಣಗೊಳ್ಳಬೇಕು. ಅದಕ್ಕಾಗಿ ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರನ್ನು ಬೆಂಬಲಿಸಬೇಕು ಎಂದು ಚುನಾವಣಾ ಅಭಿಯಾನ ಪ್ರಮುಖ್ ಬೈಕಾಡಿ ಸುಪ್ರಸಾದ್ ಶೆಟ್ಟಿ ಮನವಿ ಮಾಡಿದರು.

ಬಡವರ ಸೇವೆ, ಮಹಿಳಾ ಸಬಲೀಕರಣ, ಸ್ತ್ರೀ ರಕ್ಷಣೆ, ಕೆಳ ಹಾಗೂ ಮಧ್ಯಮ ವರ್ಗದ ಕಾಳಜಿ, ರೈತರ ಕಲ್ಯಾಣ, ಶ್ರಮಿಕ ವರ್ಗದ ಶ್ರೇಯೋಭಿವೃದ್ಧಿ ಮುಂತಾದ ದೂರದರ್ಶಿತ್ವದ ಚಿಂತನೆಯ ಅಭಿವೃದ್ಧಿಯೇ ಬಿಜೆಪಿಯ ಮೂಲ ಉದ್ದೇಶವಾಗಿದ್ದು ಕಳೆದ 10 ವರ್ಷಗಳಲ್ಲಿ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ತತ್ವದಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಅಭಿವೃದ್ಧಿಯ ಹೊಸ ಶಕೆಯೊಂದಿಗೆ ದಾಖಲೆಯ ಸಾಧನೆಗಳೊಂದಿಗೆ ವಿಶ್ವದ ಮುಂದುವರಿದ ದೇಶಗಳಲ್ಲಿ 5ನೇ ಸ್ಥಾನವನ್ನು ಅಲಂಕರಿಸಿದೆ. ವಿಕಸಿತ ಭಾರತ, ಸದೃಢ ಭಾರತ, ಸಮೃದ್ಧ ಭಾರತ ಪರಿಕಲ್ಪನೆಯೊಂದಿಗೆ ಭಾರತವನ್ನು ವಿಶ್ವದ ಮುಂದುವರಿದ ರಾಷ್ಟ್ರಗಳಲ್ಲಿ 3ನೇ ಸ್ಥಾನಕ್ಕೇರಿಸಲು ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯನ್ನು 3ನೇ ಬಾರಿಗೆ ಪ್ರಧಾನಿಯನ್ನಾಗಿಸಲು ಕೋಟ ಶ್ರೀನಿವಾಸ ಪೂಜಾರಿಯವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಸಂಚಾಲಕ ಕುತ್ಯಾರು ನವೀನ್ ಶೆಟ್ಟಿ ಮಾತನಾಡಿ ಪರಿಣಾಮಕಾರಿ ಮನೆ ಮನೆ ಪ್ರಚಾರದೊಂದಿಗೆ ಪ್ರತೀ ಬೂತ್ ಗಳನ್ನು ದೊಡ್ಡ ಅಂತರ ಮತಗಳಿಂದ ಗೆಲ್ಲುವ ಮೂಲಕ ಸಂಘಟಿತ ಪ್ರಯತ್ನದಿಂದ ಪಕ್ಷದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರನ್ನು ದೊಡ್ಡ ಅಂತರದ ಮತಗಳಿಂದ ಗೆಲ್ಲಿಸಲು ಎಲ್ಲರೂ ಬದ್ಧತೆಯಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು, ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಉಡುಪಿ ವಿಧಾನಸಭಾ ಕ್ಷೇತ್ರ ಚುನಾವಣಾ ಸಂಚಾಲಕ ಗಿರೀಶ್ ಎಮ್. ಅಂಚನ್, ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್, ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್ ಆಚಾರ್ಯ ಕಪ್ಪೆಟ್ಟು, ರಶ್ಮಿತಾ ಬಿ. ಶೆಟ್ಟಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular