ಪಡುಕುಡೂರು : ಸ್ವಾತಂತ್ರ್ಯ ಸೇನಾನಿ ಪಡುಕುಡೂರು ಬೀಡು ಎಂ. ಡಿ. ಅಧಿಕಾರಿ ಅವರ ಪ್ರತಿಮೆ ಸ್ಥಾಪನೆಯ ಕಾರ್ಯಕ್ರಮ ಯಶಸ್ವಿಯಾಗಿ ಐತಿಹಾಸಿಕ ದಾಖಲೆಯಾಗಬೇಕು, ನಮ್ಮೂರಿನ ಹೆಸರನ್ನು ದೇಶಕ್ಕೆ ಪಸರಿಸಿದ ಎಂ. ಡಿ. ಅಧಿಕಾರಿ ಹೆಸರಿನ ಜೊತೆಗೆ ನಮ್ಮೂರ ಹೆಸರು ಕೂಡ ಜನಮಾನಸದಲ್ಲಿ ಶಾಶ್ವತವಾಗಬೇಕು, ಪುತ್ಥಳಿ ಅನಾವರಣದ ಸಂಭ್ರಮ ಕಾರ್ಯಕ್ರಮದ ಯಶಸ್ಸಿಗೆ ಸರ್ವರೂ ಕೈಜೋಡಿಸಬೇಕು ಎಂದು ಪುತ್ಥಳಿ ಸ್ಥಾಪನೆಯ ರೂವಾರಿ ಪಡುಪರ್ಕಳ ಶಂಕರ ಶೆಟ್ಟಿ ಹೇಳಿದರು.
ಅವರು ಭಾನುವಾರ ಸ್ವಾತಂತ್ರ್ಯ ಸೇನಾನಿ ಪಡುಕುಡೂರು ಬೀಡು ಎಂ. ಡಿ. ಅಧಿಕಾರಿ ಪ್ರತಿಮೆ ಪ್ರತಿಷ್ಠಾಪನಾ ಸಮಿತಿಯ ವತಿಯಿಂದ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ನಮ್ಮೂರಿನ ಹೆಸರನ್ನು ಅಂದು ದೇಶಕ್ಕೆ ಪರಿಚಯಿಸಿದ ಎಂ. ಡಿ. ಅಧಿಕಾರಿ ಅವರ ಹೆಸರನ್ನು ನಮ್ಮೂರು ನಿತ್ಯ ಸ್ಮರಿಸುವಂತಾಗಬೇಕು ಆಗಸ್ಟ್ 15ರಂದು ನಡೆಯುವ ಕಾರ್ಯಕ್ರಮದ ಉದ್ದೇಶ ಯೋಚನೆಯ ಪರಿಕಲ್ಪನೆಯನ್ನು ಪಡುಪರ್ಕಳ ಶಂಕರ ಶೆಟ್ಟಿ ತಿಳಿಸಿದರು.
ಸಮಿತಿಯ ಪ್ರಮುಖರಾದ ಹೆಬ್ರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಶಿಕ್ಷಕ ಮಾತಿಬೆಟ್ಟು ಪ್ರಕಾಶ ಪೂಜಾರಿ ಮಾತನಾಡಿ ಕಾರ್ಯಕ್ರಮದ ಸಮಗ್ರ ಯೋಜನೆಯನ್ನು ರಚಿಸಿ ಸಭೆಗೆ ಮಂಡಿಸಿದರು. ಸಂಭ್ರಮದ ಯಶಸ್ವಿಗೆ ವಿವಿಧ ಯೋಜನೆ ರೂಪಿಸಿ ಪ್ರಮುಖರಾದ ಹಲವರಿಗೆ ಜವಾಬ್ಧಾರಿಯನ್ನು ಹಂಚಿಕೆ ಮಾಡಲಾಯಿತು.
ಸ್ವಾತಂತ್ರ್ಯ ಸೇನಾನಿ ಪಡುಕುಡೂರು ಬೀಡು ಎಂ. ಡಿ. ಅಧಿಕಾರಿ ಪ್ರತಿಮೆ ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷ ಜಗದೀಶ ಹೆಗ್ಡೆ ಅಧ್ಯಕ್ಷತೆ ವಹಿಸಿ ಸಂಭ್ರಮದ ಯಶಸ್ಸಿಗೆ ಸರ್ವರ ಸಹಕಾರ ಕೋರಿದರು.
ಶ್ರೀ ಭದ್ರಕಾಳಿ ದೇವಸ್ಥಾನದ ಅರ್ಚಕ ಸೂರಿಮಣ್ಣು ಸದಾಶಿವ ಉಪಾಧ್ಯಾಯ, ಪ್ರತಿಮೆ ಪ್ರತಿಷ್ಠಾಪನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಡುಪರ್ಕಳ ಹರೀಶ ಶೆಟ್ಟಿ, ಗ್ರಾಮದ ಹಿರಿಯರಾದ ಭೋಜ ಪೂಜಾರಿ, ಕೃಷ್ಣ, ಪಡುಕುಡೂರು ಶಾಲಾ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಜಯಲೀಲ, ಅಶೋಕ್ ಎಂ.ಶೆಟ್ಟಿ ಸಹಿತ ವಿವಿಧ ಪ್ರಮುಖರು, ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಪಡುಕುಡೂರು ಶಾಲಾ ಶಿಕ್ಷಕ ಹರೀಶ್ ಪೂಜಾರಿ ಸ್ವಾಗತಿಸಿ ವಂದಿಸಿದರು.