ಬೆಳ್ತಂಗಡಿ: ಚಾರಣಪ್ರಿಯರು, ಪ್ರವಾಸಿಗರಿಗೊಂದು ಖುಷಿಯ ಸುದ್ದಿ. ಬೆಳ್ತಂಗಡಿ ತಾಲೂಕಿನಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ʻಗಡಾಯಿಕಲ್ಲುʼ ಹತ್ತಲು ಇದೀಗ ಅನುಮತಿ ಸಿಕ್ಕಿದೆ. ಗಡಾಯಿಕಲ್ಲು ಅಥವಾ ನರಸಿಂಹಗಢ ಹತ್ತಲು ಹೇರಲಾಗಿದ್ದ ನಿರ್ಬಂಧ ತೆರವುಗೊಂಡಿದ್ದು, ಈಗ ಪ್ರವಾಸಿಗರು ಇಲ್ಲಿಗೆ ಆರಾಮವಾಗಿ ಪ್ರವಾಸ ಕೈಗೊಳ್ಳಬಹುದು.
ಸಮುದ್ರಮಟ್ಟದಿಂದ 1788 ಅಡಿ ಎತ್ತರದಲ್ಲಿರುವ ಗಡಾಯಿಕಲ್ಲು ತುದಿ ತಲುಪಬೇಕಾದರೆ 2800ಕ್ಕೂ ಹೆಚ್ಚು ಕಡಿದಾದ ಮೆಟ್ಟಿಲುಗಳನ್ನು ಹತ್ತಬೇಕು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಗಡಾಯಿಕಲ್ಲನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಗಡಾಯಿಕಲ್ಲು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಸುಪರ್ದಿಯಲ್ಲಿದೆ.
ಗಡಾಯಿಕಲ್ಲಿನಲ್ಲಿ ರಾತ್ರಿ ವಾಸ್ತವ್ಯಕ್ಕೆ ಅವಕಾಶವಿಲ್ಲ. ಇಲಾಖೆಯ ವೆಬ್‌ಸೈಟ್ kuduremukhanationalpark.inನಲ್ಲಿ ನೋಂದಾಯಿಸಿದವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಡಿಸೆಂಬರ್‌ವರೆಗೆ ಮಾತ್ರ ಇಲ್ಲಿಗೆ ಅವಕಾಶವಿದೆ. ನಂತರ ಕಾಡ್ಗಿಚ್ಚಿನ ಸಾಧ್ಯತೆಯಿಂದಾಗಿ ಮತ್ತೆ ನಿರ್ಬಂಧ ವಿಧಿಸಲಾಗುತ್ತದೆ.
ವಯಸ್ಕರಿಗೆ ಟಿಕೆಟ್ ದರ 150 ರೂ. ಇದ್ದು, ಮಕ್ಕಳಿಗೆ 25 ರೂ. ವಿಧಿಸಲಾಗುತ್ತದೆ. ಇದು ಸಂಪೂರ್ಣ ಪ್ಲಾಸ್ಟಿಕ್ ನಿಷೇಧಿತ ಪ್ರದೇಶವಾಗಿದೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗುತ್ತದೆ. ಬೆಳ್ತಂಗಡಿಯಿಂದ ಉಜಿರೆ ಮಾರ್ಗವಾಗಿ ಹೋಗುವಾಗ ಬೆಳ್ತಂಗಡಿ ಬಸ್ಸು ನಿಲ್ದಾಣದಿಂದ 1 ಕಿ.ಮೀ. ದೂರದಲ್ಲಿ ಲಾಯಿಲ ಎಂಬಲ್ಲಿಂದ ಕಿಲ್ಲೂರು ಮಾರ್ಗವಾಗಿ 5 ಕಿ.ಮೀ. ಪ್ರಯಾಣಿಸಿದರೆ, ಅಲ್ಲಿ ಮಂಜೊಟ್ಟಿ ಎಂಬ ಊರು ಸಿಗುತ್ತದೆ. ಲ್ಲಿಂದ 3 ಕಿ.ಮೀ. ಪ್ರಯಾಣಿಸಿದರೆ ಗಡಾಯಿಕಲ್ಲು ಸಿಗುತ್ತದೆ. ಮಂಜೊಟ್ಟಿ ತನಕ ಬಸ್ಸು ವ್ಯವಸ್ಥೆ ಇದೆ. ಸ್ವಂತ ವಾಹನವಿದ್ದವರು ಕಲ್ಲಿನ ಸಮೀಪದವರೆಗೂ ಹೋಗಬಹುದು. ಇಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆಯೂ ಇದೆ. ಬೆಳಿಗ್ಗೆ 7 ಗಂಟೆಯಿಂದ 2 ಗಂಟೆವರೆಗೆ ಗಡಾಯಿಕಲ್ಲು ಏರಲು ಅವಕಾಶವಿದೆ.