ಆಸ್ತಿಕರಿಗೆ ದೇವರನ್ನು ಕಾಣಲು ಕಾರಣ ಬೇಕಿಲ್ಲ. ಇಲ್ಲೊಂದು ಕಡೆ ಪಪ್ಪಾಯ ಹಣ್ಣಿನಲ್ಲಿ ಗಣೇಶನನ್ನು ಕಂಡು ಜನ ಭಯಭಕ್ತಿಯಿಂದ ಪೂಜಿಸಿದ್ದಾರೆ. ಕಾಕಿನಾಡ ಜಿಲ್ಲೆಯ ಗಂಡೇಪಲ್ಲಿ ಮಂಡಲದಲ್ಲಿ ಈ ವಿಚಿತ್ರ ಪಪ್ಪಾಯ ಪತ್ತೆಯಾಗಿದೆ. ಪಪ್ಪಾಯಿ ಹಣ್ಣಿನೊಳಗೆ ಗಣೇಶನ ಪ್ರತಿಮೆಯಂತೆ ಕಂಗೊಳಿಸುತ್ತಿದ್ದ ದೃಶ್ಯವೊಂದು ಗ್ರಾಮಸ್ಥರನ್ನು ಸೆಳೆದಿದೆ. ಈ ವಿಶೇಷ ಪಪ್ಪಾಯವನ್ನು ನೋಡಲು ಜನರು ದಂಡುದಂಡಾಗಿಯೇ ಬರುತ್ತಿದ್ದಾರೆ. ಪಪ್ಪಾಯದೊಳಗೆ ಸೊಂಡಿಲಿನ ರೂಪದಲ್ಲಿ ವಿನಾಯಕ ಪ್ರಕಟವಾಗಿದ್ದಾನೆ ಎಂದು ಜನರು ಆ ಹಣ್ಣಿಗೆ ಪೂಜೆ ಸಲ್ಲಿಸಿದ್ದಾರೆ.
ಪಪ್ಪಾಯಿ ಬೆಳದ ರೈತರೊಬ್ಬರು ಈ ಹಣ್ಣನ್ನು ಗಣೇಶನಿಗೆ ಪೂಜೆ ಸಲ್ಲಿಸುವಾಗ ವಿನಾಯಕನ ದೇವಸ್ಥಾನದಲ್ಲಿ ಇಟ್ಟಿದ್ದರು. ಬಳಿಕ ಅದನ್ನು ತೆರೆದು ನೋಡಿದಾಗ ಇದರಲ್ಲಿ ವಿನಾಯಕನ ಸೊಂಡಿಲು ಕಾಣಿಸಿರುವುದು ಎಲ್ಲೆಡೆ ಸುದ್ದಿಯಾಗಿದೆ ಹೀಗಾಗಿ ಪಪ್ಪಾಯವನ್ನು ನಂತರ ದೇವರಿಗೆ ನೈವೇದ್ಯವಾಗಿ ಅರ್ಪಿಸಲಾಯಿತು. ಗಂಡೇಪಲ್ಲಿ ಗ್ರಾಮದ ನಕ್ಕ ಪೆಂಟಮ್ಮ ಎಂಬವರ ತೋಟದಲ್ಲಿ ಬೆಳೆದಿದ್ದ ಪಪ್ಪಾಯದಲ್ಲಿ ಈ ವಿಸ್ಮಯ ಕಂಡುಬಂದಿದೆ. ಹಣ್ಣಿನಲ್ಲಿ ಗಣೇಶನ ಮುಖದ ಚಿತ್ರ ಭಾಸವಾಗುತ್ತಿದ್ದಂತೆ, ಸಾಕ್ಷಾತ್ ಗಣೇಶನೇ ಮನೆಗೆ ಬಂದಿದ್ದಾನೆ ಎಂದು ಭಾವಿಸಿ ಪೂಜಾ ಮಂದಿರದಲ್ಲಿಟ್ಟು ಪೂಜಿಸಿದ್ದಾರೆ. ಈ ದೃಶ್ಯ ಕಣ್ತುಂಬಿಕೊಳ್ಳಲು ದೊಡ್ಡ ಸಂಖ್ಯೆಯಲ್ಲಿ ಗ್ರಾಮಸ್ಥರು ಆಗಮಿಸಿದ್ದಾರೆ. ಪಪ್ಪಾಯದಲ್ಲಿ ಗಣೇಶನ ಆಕೃತಿಯನ್ನು ಕಂಡು ಆಶ್ಚರ್ಯ ಚಕಿತರಾಗಿದ್ದಾರೆ.