Saturday, December 14, 2024
Homeರಾಜ್ಯ3 ವರ್ಷದ ಪುಟ್ಟ ಕಂದಮ್ಮನ ಹಠಕ್ಕೆ ಮನಸೋತು ಮುಸ್ಲಿಂ ಕುಟುಂಬದ ಮನೆಯಲ್ಲಿ ಗಣೇಶ ಪ್ರತಿಷ್ಠಾಪನೆ |...

3 ವರ್ಷದ ಪುಟ್ಟ ಕಂದಮ್ಮನ ಹಠಕ್ಕೆ ಮನಸೋತು ಮುಸ್ಲಿಂ ಕುಟುಂಬದ ಮನೆಯಲ್ಲಿ ಗಣೇಶ ಪ್ರತಿಷ್ಠಾಪನೆ | ಸೌಹಾರ್ಧತೆಗೆ ಮಾದರಿಯಾದ ಮುಸ್ತಫಾಗೆ ಎಲ್ಲೆಡೆಯಿಂದ ಮೆಚ್ಚುಗೆ

ಗದಗ: ಸಮಾಜದಲ್ಲಿ ಹಿಂದೂ, ಮುಸ್ಲಿಂ ಜಗಳದ ನಡುವೆ, ಮುಸ್ಲಿಂ ಸಮುದಾಯದ ಕುಟುಂಬವೊಂದು ಗಣೇಶನ ಮೂರ್ತಿ ಪ್ರಷ್ಠಾಪಿಸಿ ಹಿಂದೂ ಹಬ್ಬ ಆಚರಿಸಿ ಸೌಹಾರ್ಧತೆ ಮೆರೆದು, ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಮುಸ್ಲಿಂ ಸಮುದಾಯದ ಮುಸ್ತಾಫಾ ಮಾಬುಸಾಬ್ ಕೋಲ್ಕಾರ ಎಂಬವರು ಗಣೇಶ ಚತುರ್ಥಿ ದಿನ, ಹಿಂದೂ ಸಂಪ್ರದಾಯದಂತೆ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಭಾವೈಕ್ಯತೆ ಸಾರಿದ್ದಾರೆ.
ಮುಸ್ತಾಫಾ ಮತ್ತು ಯಾಸ್ಮಿನಾ ಬಾನು ದಂಪತಿಗೆ ಐದು ಜನ ಮಕ್ಕಳಿದ್ದಾರೆ. ಅವರ ಕೊನೆಯ ಮಗ 3 ವರ್ಷದ ಹಜರತಲಿಗೆ ಗಣೇಶ ಹಬ್ಬದ ಸಂಭ್ರಮವೆಂದರೆ ಖುಷಿ. ದೇವರು-ಧರ್ಮ, ಜಾತಿ ಹೆಸರಿನಲ್ಲಿ ದೇಶದಲ್ಲಿ ನಡೆಯುತ್ತಿರುವ ಅರಾಜಕತೆ, ಧರ್ಮಯುದ್ಧದ ಬಗ್ಗೆ ಏನೂ ಅರಿಯದ ಪುಟಾಣಿ ಹಜರತಲಿ, ತಾನೂ ಗಣೇಶನನ್ನು ಮನೆಗೆ ತೆಗೆದುಕೊಂಡು ಹೋಗಬೇಕು, ಎಲ್ಲರಂತೆ ಪೂಜಿಸಬೇಕು, ಪಟಾಕಿ ಹೊಡೆಯಬೇಕು, ಕುಣಿದು ಕುಪ್ಪಳಿಸಬೇಕೆಂಬ ಹಂಬಲ. ಈ ಬಗ್ಗೆ ಅಪ್ಪ-ಅಮ್ಮನ ಬಳಿ ಕೇಳಿ ಅತ್ತುಕರೆದು ಹಠ ಮಾಡಿದ್ದರೂ, ತಂದೆ ಹೇಗೋ ಸಮಾಧಾನ ಮಾಡಿ ಮಾತು ಮರೆಸಿದ್ದರು.
ಆದರೆ, ಗಣೇಶ ಚತುರ್ಥಿ ದಿನ ಎಲ್ಲರೂ ಮನೆಗೆ ಗಣೇಶ ಮೂರ್ತಿ ತರುವುದನ್ನು ಗಮನಿಸಿದ ಹಜರತಲಿ, ತನ್ನ ಅಣ್ಣನೊಂದಿಗೆ ಗಣೇಶಮೂರ್ತಿ ಮಾರಾಟ ಮಾಡುವಲ್ಲಿಗೆ ಹೋಗಿ ಗಣೇಶನ ಮೂರ್ತಿಯನ್ನು ತಂದೇ ಬಿಟ್ಟಿದ್ದ. ಇದನ್ನು ಕಂಡ ತಂದೆ-ತಾಯಿ ಒಂದು ಕ್ಷಣ ಮೌನವಾಗಿದ್ದಾರೆ. ಆದರೆ, ಗ್ರಾಮೀಣ ಭಾಗದ ಪರಿಸರ. ಜಾತಿ ಧರ್ಮದ ಹಂಗಿಲ್ಲದೇ ಎಲ್ಲರೂಂದಿಗೆ ಸಹೋದರತ್ವ ಭಾವನೆಯಿಂದ ಬದುಕುವುದನ್ನು ಅರಿತ ತಂದೆ-ತಾಯಿಗಳು ಮಗನ ಬಗ್ಗೆ ಒಂದಷ್ಟೂ ಬೇಸರಿಸದೆ ಗಣೇಶನ ಮೂರ್ತಿಯನ್ನು ಶ್ರದ್ಧಾ ಭಕ್ತಿಯಿಂದ ಬರ ಮಾಡಿಕೊಂಡು, ಮನೆಯಲ್ಲಿ ಪ್ರತಿಷ್ಠಾಪಿಸಿ ಹಿಂದೂ ಸಂಪ್ರದಾಯದಂತೆ ಪೂಜಿಸಿದ್ದಾರೆ.
ದೇವರೇ ಮನೆಗೆ ಬಂದಂತೆ!: ಮಗನಿಗೆ ಗಣೇಶನ ಮೂರ್ತಿಯೆಂದರೆ ತುಂಬಾ ಇಷ್ಟ. ಅಂಗನವಾಡಿಯಲ್ಲೂ ರಾಷ್ಟೀಯ ಹಬ್ಬದ ದಿನ ಆತನಿಗೆ ಹಿಂದೂ ದೇವರ ವೇಷಭೂಷಣ ತೊಡಿಸಿದ್ದೇವೆ. ಮಕ್ಕಳು ದೇವರ ಸಮಾನ ಎನ್ನುತ್ತಾರೆ. ದೇವರೇ ಮನೆಗೆ ಬಂದಂತಾಗಿದ್ದು, ಶ್ರದ್ಧೆ, ಭಕ್ತಿ, ಸಂಭ್ರಮದಿಂದ ಗಣೇಶನ ಮೂರ್ತಿಯನ್ನು ಪೂಜಿಸಿದ್ದೇವೆ. ಇನ್ನು ಪ್ರತಿ ವರ್ಷವೂ ನಮ್ಮ ಮನೆಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸುತ್ತೇವೆ ಎಂದು ಹಜರತಲಿ ಪೋಷಕರಾದ ಮುಸ್ತಪಾ-ಯಾಸ್ಮಿನಾಬಾನು ಹೇಳಿದ್ದಾರೆ.
ದೇವರ ಹೆಸರಿನಲ್ಲಿ ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕದಡುವವರ ನಡುವೆ ಮುಸ್ಲಿಂ ಧರ್ಮದವರಾದರೂ ತಮ್ಮ ಮಗನ ಆಸೆಯಂತೆ ಮನೆಯಲ್ಲಿ ಗಣೇಶನ ಮೂರ್ತಿಯನ್ನಿಟ್ಟು ಪೂಜಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಈಗಲೂ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಎಲ್ಲ ಜಾತಿ, ಧರ್ಮದವರು ಪರಸ್ಪರ ಸ್ನೇಹ, ಸಹೋದರತ್ವದೊಂದಿಗೆ ಸಂಭ್ರಮಿಸುತ್ತಾರೆ ಎಂದು ಗ್ರಾಮಸ್ಥ ಈರಣ್ಣ ಶೀರನಳ್ಳಿ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular