ಉಡುಪಿ: ವಿಚಾರಣಾಧೀನ ಕೈದಿಯೊಬ್ಬರಿಗೆ ನೀಡಲು ತಂದಿದ್ದ ಬಿಸ್ಕೆಟ್, ಹಣ್ಣುಗಳ ಬ್ಯಾಗ್ ನಲ್ಲಿ ಗಾಂಜಾ ಪತ್ತೆಯಾಗಿರುವ ಘಟನೆ ಹಿರಿಯಡ್ಕದ ಜಿಲ್ಲಾ ಕಾರಾಗೃಹದಲ್ಲಿ ನಡೆದಿದ್ದು,ಈ ಸಂಬಂಧ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಚಾರಣಾಧೀನ ಕೈದಿ ರೇವುನಾಥ್ ಅಲಿಯಾಸ್ ಪ್ರೇಮನಾಥ್ ಎಂಬವರ ದರ್ಶನಕ್ಕೆ ಆತನ ಸ್ನೇಹಿತರಾದ ಸುದೀಶ್, ವರುಣ್ ಎಂಬವರು ಮೇ 20ರಂದು ಜಿಲ್ಲಾ ಕಾರಾಗೃಹಕ್ಕೆ ಬಂದಿದ್ದರು. ಈ ವೇಳೆ ಬಂಧಿತನಿಗೆ ನೀಡಲು ಬಿಸ್ಕೆಟ್, ಹಣ್ಣು ತಂದಿದ್ದು, ಅದನ್ನು ಮುಖ್ಯದ್ವಾರದ ಸಿಬ್ಬಂದಿಯಲ್ಲಿ ನೀಡಿ, ಸಂದರ್ಶನ ಕೊಠಡಿಗೆ ತೆರಳಿದ್ದರು.
ವಸ್ತುಗಳನ್ನು ಸಿಬ್ಬಂದಿ ಪರಿಶೀಲಿಸಿದಾಗ ಹಣ್ಣು, ಬಿಸ್ಕೆಟ್ ನಡುವೆ ಪ್ಲಾಸ್ಟಿಕ್ ತೊಟ್ಟೆಯಲ್ಲಿ 10ರಿಂದ 15 ಗ್ರಾಂನಷ್ಟು ಗಾಂಜಾದಂತೆ ಕಂಡುಬರುವ ಸೊಪ್ಪು ಪತ್ತೆಯಾಗಿದೆ. ಈ ಸಂಬಂಧ ಇದನ್ನು ತಂದವರ ವಿರುದ್ಧ ದೂರು ದಾಖಲಾಗಿದೆ.