ಥಾಣೆ: ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ 12 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿ ಕೊಲೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಆರೋಪಿ ವಿಶಾಲ್ ಗಾವ್ಲಿಯನ್ನು ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯಲ್ಲಿ ಬಂಧಿಸಿದ್ದ ಪೊಲೀಸರು, ಇಂದು ಬೆಳಗ್ಗೆ ನಗರಕ್ಕೆ ಕರೆತಂದು ಥಾಣೆ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಕಲ್ಯಾಣ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ವಿ ಎ ಪತ್ರವಾಲೆ ಅವರು, ಆರೋಪಿಯನ್ನು 2025ರ ಜನವರಿ 2ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಅತುಲ್ ಝೆಂಡೆ ತಿಳಿಸಿದ್ದಾರೆ.
ಮಂಗಳವಾರ ಥಾಣೆ ಜಿಲ್ಲೆಯ ತವರುಮನೆ ಕಲ್ಯಾಣ್ ಸಮೀಪದ ಗ್ರಾಮದಲ್ಲಿ ಬಾಲಕಿಯ ಶವ ಪತ್ತೆಯಾಗಿದ್ದು, ಬಾಲಕಿಯನ್ನು ಅಪಹರಿಸಿ. ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಶಾಲ್ ಗಾವ್ಲಿಯ ಪತ್ನಿ ಸಾಕ್ಷಿ ಗಾವ್ಲಿ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಿದ್ದರು. ಕಲ್ಯಾಣ ನ್ಯಾಯಾಲಯ ಇಂದು ಸಾಕ್ಷಿ ಗಾವ್ಲಿ ಅವರ ಪೊಲೀಸ್ ಕಸ್ಟಡಿಯನ್ನು ಜನವರಿ 2 ರವರೆಗೆ ವಿಸ್ತರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಶಾಲ್ ಗಾವ್ಲಿ ತನ್ನ ಪತ್ನಿಯ ಸಹಾಯದಿಂದ ಬಾಲಕಿಯನ್ನು ಅಪಹರಿಸಿ ಕಲ್ಯಾಣ್‌ನ ಚಕ್ಕಿ ನಾಕಾ ಪ್ರದೇಶದಲ್ಲಿ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ನಂತರ ದಂಪತಿ ಶವವನ್ನು ಆಟೋರಿಕ್ಷಾದಲ್ಲಿ ತೆಗೆದುಕೊಂಡು ಹೋಗಿ ಕಲ್ಯಾಣ್-ಪದ್ಘಾ ರಸ್ತೆಯ ಬಾಪಗಾಂವ್‌ನಲ್ಲಿ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.