ಚಾಕೋಲೆಟ್‌ ಆಮಿಷವೊಡ್ಡಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಯ ಬಂಧನ

0
346

ಬೆಂಗಳೂರು : ಚಾಕೋಲೆಟ್‌ ಆಮಿಷವೊಡ್ಡಿ ಹತ್ತು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಿಹಾರ ಮೂಲದ ರಾಜೇಶ್(55) ಬಂಧಿತ. ಶನಿವಾರ ರಾತ್ರಿ ಬಾಲಕಿಗೆ ಚಾಕೋಲೆಟ್‌ ಕೊಡಿಸುವುದಾಗಿ ಶೌಚಾಲಯಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸೆಗಿದ್ದ. ಈ ಸಂಬಂಧ ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಉದ್ಯೋಗ ಅರಸಿ ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ರಾಜೇಶ್‌, ನಾಗೇನಹಳ್ಳಿ ಬಳಿಯ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರಲ್ಲಿ ಸೆಕ್ಯೂರಿ ಗಾರ್ಡ್‌ ಕೆಲಸ ಮಾಡುತ್ತಿದ್ದ. ನೇಪಾಳ ಮೂಲದ ಬಾಲಕಿಯ ಪೋಷಕರು ನಾಗೇನಹಳ್ಳಿಯ ಮತ್ತೊಂದು ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಕೆಲಸ ಮಾಡಿಕೊಂಡಿದ್ದರು.

ಆರೋಪಿ ರಾಜೇಶ್‌ ಈ ಬಾಲಕಿಗೆ ಆಗಾಗ ಚಾಕೋಲೆಟ್‌ ನೀಡಿ ಮಾತನಾಡಿಸುತ್ತಿದ್ದ. ಅದರಂತೆ ಶನಿವಾರ ರಾತ್ರಿ ಬಾಲಕಿ ಬಳಿ ತೆರಳಿ ಚಾಕೋಲೆಟ್‌ ನೀಡುವುದಾಗಿ ಶೌಚಾಲಯಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸೆಗಿದ್ದಾನೆ. ಬಳಿಕ ಮನೆಗೆ ಬಂದು ಬಾಲಕಿಯು ಪೋಷಕರ ಬಳಿ ದೌರ್ಜನ್ಯದ ಬಗ್ಗೆ ಹೇಳಿದ್ದಾಳೆ. ಈ ಸಂಬಂಧ ಪೋಷಕರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here