ಭೋಪಾಲ್: ಕಾರು, ಮನೆ, ಕೋಣೆ ಬಾಡಿಗೆಗೆ ನೀಡುವುದನ್ನು ನಾವು ಕೇಳಿದ್ದೇವೆ. ಅದರೆ ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ಪತ್ನಿಯರನ್ನು ಬಾಡಿಗೆಗೆ ಪಡೆಯುವ ಅನಿಷ್ಠ ಪದ್ಧತಿ ದಶಕಗಳಿಂದ ಚಾಲ್ತಿಯಲ್ಲಿರುವುದು ದುರದೃಷ್ಟಕರ. ಒಂದು ಸಮಾಜದ ಏಳಿಗೆ ಆ ಸಮಾಜದ ಮಹಿಳೆಯರ ಏಳಿಗೆಯ ಆಧಾರದಲ್ಲಿ ಲೆಕ್ಕ ಹಾಕಬಹುದು ಎಂದು ತಿಳಿದವರು ಹೇಳುತ್ತಾರೆ. ಆದರೆ, ಇಲ್ಲಿ ಮಹಿಳೆಯರನ್ನು ಈ ರೀತಿ ಅಸಹ್ಯಕರವಾಗಿ ನಡೆಸಿಕೊಳ್ಳುತ್ತಿರುವ ಸಂಪ್ರದಾಯ ಇನ್ನೂ ಜೀವಂತವಿದೆ ಎನ್ನಲಾಗಿದೆ.
ಈ ಪದ್ಧತಿಯನ್ನು ʻದಾಡಿಚಾ ಪ್ರಾಥಾʼ ಎನ್ನಲಾಗುತ್ತದೆ. ಪ್ರತಿ ವರ್ಷ ಇಲ್ಲಿನ ಶಿವಪುರಿ ಹಳ್ಳಿಯಲ್ಲಿ ಮಾರುಕಟ್ಟೆಯೊಂದನ್ನು ಸ್ಥಾಪಿಸಲಾಗುತ್ತದೆ. ಅಲ್ಲಿ ಕುಟುಂಬಗಳು ತಮ್ಮ ಹೆಣ್ಣುಮಕ್ಕಳು ಅಥವಾ ಹೆಂಡತಿಯರನ್ನು ಬಾಡಿಗೆಗೆ ಪಡೆಯುತ್ತಾರೆ. ಅಂದರೆ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಇನ್ನೊಬ್ಬರಿಗೆ, ಪುರುಷರಿಗೆ ಸ್ವಯಂ ಪ್ರೇರಣೆಯಿಂದ ಬಾಡಿಗೆಗೆ ನೀಡುತ್ತಾರಂತೆ. ವಿವಾಹಿತ ಪತಿಯೂ ತನ್ನ ಹೆಂಡತಿಯನ್ನು ಇತರ ಪುರುಷರಿಗೆ ಬಾಡಿಗೆಗೆ ಕೊಡುತ್ತಾನಂತೆ. ಶ್ರೀಮಂತರು ಇತರರ ಹೆಂಡತಿಯರನ್ನು ಬಾಡಿಗೆಗೆ ಪಡೆಯುತ್ತಾರೆ. ಹತ್ತು, ಐವತ್ತು, ನೂರು ರೂಪಾಯಿಯ ಸ್ಟಾಂಪ್ ಪೇಪರ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ.
ಧಾಡಿಚಾದಲ್ಲಿ 8 ವರ್ಷದಿಂದ 15 ವರ್ಷದ ಬಾಲಕಿಯರಿಗೆ ಹೆಚ್ಚು ಬೇಡಿಕೆಯಿದೆಯಂತೆ. ಒಪ್ಪಂದ ಕೊನೆಗೊಂಡ ನಂತರ ಅದೇ ವ್ಯಕ್ತಿಯಿಂದ ಒಪ್ಪಂದ ನವೀಕರಿಸಲಾಗುತ್ತದೆ ಅಥವಾ ಇತರ ಪುರುಷನೊಂದಿಗೆ ಹೊಸ ಒಪ್ಪಂದ ಮಾಡಲಾಗುತ್ತದೆ. ಸಾಮಾನ್ಯವಾಗಿ 15,000 ರೂಪಾಯಿಯಿಂದ 20,000 ರೂ. ವರೆಗೆ ಬೆಲೆ ನಿಗದಿಪಡಿಸಲಾಗುತ್ತದೆ.
ಬರ್ಮಾ, ಪಾಕಿಸ್ತಾನ, ಉತ್ತರ ಕೊರಿಯಾದಂತಹ ದೇಶಗಳಲ್ಲಿ ವಧು ಮಾರುಕಟ್ಟೆಗಳಿರುವುದು ಗೊತ್ತಿದೆ. ಆದರೆ ಈ ಪಟ್ಟಿಯಲ್ಲಿ ಭಾರತವೂ ಇದೆ ಎಂಬುದು ಆಘಾತಕಾರಿ.