Monday, December 2, 2024
Homeಬೆಂಗಳೂರುಜ್ಞಾನಾಕ್ಷಿ ರಾಜರಾಜೇಶ್ವರಿ ಮ್ಯೂಸಿಕ್ ವಿಡಿಯೋ ಆಲ್ಬಮ್ ಶೀರ್ಷಿಕೆ ಅನಾವರಣ

ಜ್ಞಾನಾಕ್ಷಿ ರಾಜರಾಜೇಶ್ವರಿ ಮ್ಯೂಸಿಕ್ ವಿಡಿಯೋ ಆಲ್ಬಮ್ ಶೀರ್ಷಿಕೆ ಅನಾವರಣ

ಬೆಂಗಳೂರಿನ ಸುಪ್ರಸಿದ್ದ ಐತಿಹಾಸಿಕ ಶ್ರೀ ಜ್ಞಾನಾಕ್ಷಿ ರಾಜರಾಜೇಶ್ವರಿ ದೇವಸ್ಥಾನ, ಶ್ರೀ ಕೈಲಾಸ ಆಶ್ರಮದಲ್ಲಿ ಪರಮಪೂಜ್ಯ ಪರಮಾಚಾರ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿಯವರ 64 ನೇ ಜಯಂತಿ ಮಹೋತ್ಸವ ಸಲುವಾಗಿ ಹಲವಾರು ಸಾಂಸ್ಕೃತಿಕ ಆಚರಣೆಗಳು ಅಪಾರ ಭಕ್ತಸಮೂಹದೊಂದಿಗೆ ಅದ್ದೂರಿಯಾಗಿ ನಡೆದವು. ಈ ಸಂದರ್ಭದಲ್ಲಿ ದೇವಿ ಶ್ರೀ ರಾಜರಾಜೇಶ್ವರಿಯನ್ನು ಸ್ತುತಿಸುವ “ಜ್ಞಾನಾಕ್ಷಿ ರಾಜರಾಜೇಶ್ವರಿ”
ಎಂಬ ಬಹುಭಾಷಾ ಮ್ಯೂಸಿಕಲ್ ವಿಡಿಯೋ ಆಲ್ಬಮ್ ಶೀರ್ಷಿಕೆಯನ್ನು ಜಗದ್ಗುರು ಶ್ರೀ ಶ್ರೀ ಜಯೇಂದ್ರಪುರಿ ಮಹಾಸ್ವಾಮೀಜಿಯವರು ಅನಾವರಣಗೊಳಿಸಿದರು.

ಸ್ವಾಮೀಜಿಯವರ ಕೃಪಾಶೀರ್ವಾದದೊಂದಿಗೆ ಸಂಸ್ಕೃತ, ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಸೇರಿದಂತೆ ಆರು ಭಾಷೆಗಳಲ್ಲಿ ಈ ಆಲ್ಬಮ್ ತಯಾರಾಗುತ್ತಿದ್ದು ಸಾಂಪ್ರದಾಯಿಕ ಸ್ತೋತ್ರಗಳು, ಶಾಸ್ತ್ರೀಯ ಕೃತಿಗಳು, ಹಾಡುಗಳು ಮತ್ತು ಭಜನೆಗಳನ್ನು ಒಳಗೊಂಡಿದೆ. ಈ ಆಲ್ಬಂ ಅನ್ನು ಖ್ಯಾತ ಸಂಗೀತ ಸಂಯೋಜಕ ಮಹೇಶ್ ಮಹದೇವ್ ಸಂಗೀತ ಸಂಯೋಜನೆ ಮಾಡಿ ನಿರ್ದೇಶನ ಮಾಡಿದ್ದು ಖ್ಯಾತ ಬಹುಭಾಷಾ ಹಿನ್ನೆಲೆ ಗಾಯಕಿ ಡಾ.ಪ್ರಿಯದರ್ಶಿನಿ ಮತ್ತು ಇತರರು ಹಾಡಿದ್ದಾರೆ. ಮಲಯಾಳಂ ಸಾಹಿತ್ಯವನ್ನು ಸಿಜು ತುರವೂರ್, ಸಂಸ್ಕೃತ, ಹಿಂದಿ ಮತ್ತು ಕನ್ನಡ ಸಾಹಿತ್ಯವನ್ನು ಮಹೇಶ್ ಮಹದೇವ್ ರಚಿಸಿದ್ದಾರೆ.

ಇನ್ನೊಂದು ವಿಶೇಷವೆಂದರೆ ಸಂಗೀತ ಸಂಯೋಜಕ ಮಹೇಶ್ ಮಹದೇವ್ ಅವರು ದೇವಿಯ ಮೇಲೆ ಸೃಷ್ಟಿಸಿರುವ ಹೊಸ ರಾಗವನ್ನು ಶ್ರೀ ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿಯವರು “ಶ್ರೀ ಜ್ಞಾನಾಕ್ಷಿಜಾ”ಎಂದು ಹೆಸರಿಡುವ ಮೂಲಕ ಅನಾವರಣಗೊಳಿಸಿದರು. “ಶ್ರೀ ಜ್ಞಾನಾಕ್ಷಿಜಾ”ಎಂದರೇ ದೇವಿ ಜ್ಞಾನಾಕ್ಷಿ ರಾಜರಾಜೇಶ್ವರಿ ಮೂರ್ತಿಯಿಂದ ಉತ್ಪನ್ನವಾಗಿರುವುದು ಎಂದರ್ಥ. ಈ ರಾಗವು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ 21ನೇ ಮೇಳಕರ್ತ ರಾಗವಾದ ಕೀರವಾಣಿಯ ಜನ್ಯರಾಗವಾಗಿದೆ.

“ಈ ಹೊಸ ರಾಗ, ಅದರಿಂದ ರಚಿಸಲ್ಪಡುವ ಗೀತೆಗಳು ಹಾಗೂ ದೇವಿಯ ಈ ವಿಶೇಷ ಆಲ್ಬಮ್ ಕೇಳುಗರೆಲ್ಲರಿಗೂ ಭಗವತಿಯು ಹೆಚ್ಚು ಭಕ್ತಿಯನ್ನು ಮಂಗಳವನ್ನುಂಟುಮಾಡಲಿ” ಎಂದು ಜಗದ್ಗುರು ಪರಮಾಚಾರ್ಯ ಶ್ರೀ ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿಯವರು ಆಶೀರ್ವದಿಸಿದರು.

“ದೇವಿ ಆರಾಧಕರಾದ ನಾವೆಲ್ಲ ಸೇರಿ ಹೊರತರುತ್ತಿರುವ ಈ ವಿಶೇಷ ಆಲ್ಬಮ್ ನಿರ್ಮಾಣಕ್ಕೆ ನಾನು ಪ್ರೋತ್ಸಾಹ-ಸಹಕಾರ ನೀಡುತ್ತಿರುವುದು ನನಗೆ ಅತ್ಯಂತ ಖುಷಿ ತಂದಿದೆ” ಎಂದು ಖ್ಯಾತ ಉದ್ಯಮಿಗಳು ಹಾಗೂ ಕಲಾ ಪೋಷಕರಾದ ಡಾ.ಬಿ.ಎಂ.ಉಮೇಶ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

“ಸುಮಾರು ಎರಡು ದಶಕಕ್ಕೂ ಹೆಚ್ಚು ಕಾಲದಿಂದಲೂ ನಾನು ಈ ದೇವಸ್ಥಾನಕ್ಕೆ ಭಕ್ತನಾಗಿದ್ದು, ನನ್ನ ವೃತ್ತಿಜೀವನದಲ್ಲಿ ಸಾಕಷ್ಟು ಪವಾಡಗಳು ನಡೆದಿವೆ. ಇಂದು ದೇವಿಯು ನನಗೆ ಅವರನ್ನು ಸ್ತುತಿಸುವ ಗೀತೆಗಳನ್ನು ರಚಿಸುವ ಹಾಗೂ ಜಗನ್ಮಾತೆಯ ಮೇಲೆ ಹೊಸ ರಾಗವನ್ನು ಸೃಷ್ಟಿಸುವಂತೆ ಮಾಡಿ ಆಶೀರ್ವದಿಸಿದ್ದಾರೆ” ಎಂದು ಮಹೇಶ್ ಮಹದೇವ್ ಸಂತೋಷ ಹಂಚಿಕೊಂಡರು. ಡಾ.ಪ್ರಿಯದರ್ಶಿನಿ ಮಾತನಾಡಿ, “ಆಲ್ಬಂನಲ್ಲಿ ಹಾಡುಗಳನ್ನು ಹಾಡಲು ದೇವಿಯೇ ಆಯ್ಕೆ ಮಾಡಿರುವುದು ನನ್ನ ಪುಣ್ಯ ಎಂದು ಭಾವಿಸುತ್ತೇನೆ” ಎಂದರು. ಶಿವಶಕ್ತಿ ಗ್ರೂಪ್‌ನ ಶಿವಶಕ್ತಿ ಡಿಜಿಟಲ್ ಮೀಡಿಯಾ ಪ್ರೊಡಕ್ಷನ್ಸ್ ವತಿಯಿಂದ ಈ ವೀಡಿಯೋ ಆಲ್ಬಂ ತಯಾರಾಗುತ್ತಿದ್ದು, ಶೀಘ್ರದಲ್ಲೇ ಪಿ.ಎಂ ಆಡಿಯೋಸ್ ಮತ್ತು ಎಂಟರ್‌ಟೈನ್‌ಮೆಂಟ್ಸ್ ‌ಮೂಲಕ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ

RELATED ARTICLES
- Advertisment -
Google search engine

Most Popular