ಮಂಗಳೂರು: ತುಳುನಾಡಿನ ದೈವಗಳೆಂದರೆ ಸಮಸ್ಯೆಗಳನ್ನು ಪರಿಹರಿಸುವ, ಜೀವನ ಜಟಿಲವಾದಾಗ ಮಾರ್ಗದರ್ಶನ ತೋರುವ, ಕೈಹಿಡಿದು ಮುನ್ನಡೆಸುವ ಅಭಯದಾಯಕರು. ಯಾವುದೇ ಕೆಲಸಕ್ಕೆ ಹೊಸದಾಗಿ ಕೈಹಾಕುವಾಗಲೂ ದೈವಗಳ ಕೃಪೆ ಇರಲೆಂದು ತುಳುನಾಡಿನ ಜನ ದೈವಕ್ಕೆ ಭಕ್ತಿಯಿಂದ ಕೈ ಮುಗಿದು ಪ್ರಾರ್ಥಿಸುತ್ತಾರೆ.
ಬೆಳೆಯುತ್ತಿರುವ ಮಂಗಳೂರು ನಗರಕ್ಕೆ ಸಿಕ್ಕ ಸ್ಮಾರ್ಟ್ ಸಿಟಿ ಗರಿಯಿಂದಾಗಿ ನಗರದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳು ಆರಂಭವಾಗಿದ್ದವು. ಹಲವಾರು ವೃತ್ತಗಳು, ನಗರದ ಪ್ರಮುಖ ರಸ್ತೆಗಳು, ಪಾರ್ಕ್‌ಗಳು ಹೀಗೆ ಹಲವು ಅಭಿವೃದ್ದಿ ಕಾರ್ಯ ನಡೆದಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ಸ್ಮಾರ್ಟ್ ಸಿಟಿ ಕಾಮಗಾರಿಗಳು ಆರಕ್ಕೇರದೆ ಮೂರಕ್ಕೆ ಇಳಿಯದೇ ಅರ್ಧಕ್ಕೆ ನಿಂತಿವೆ.
ಈ ಕಾಮಗಾರಿಯ ಈಗಿನ ಈ ಸ್ಥಿತಿಗೆ ಕಾರಣ ಇಲ್ಲೇ ಸಮೀಪದಲ್ಲಿ ಇರುವ ಶರವು ಮಹಾ ಗುಳಿಗ ಅನ್ನೋದು ಸದ್ಯ ಚರ್ಚೆಯಲ್ಲಿ ಇರುವ ವಿಷಯ. ಇದನ್ನು ಇತ್ತೀಚೆಗೆ ಶರವು ಮಹಾ ಗುಳಿಗನಿಗೆ ನೀಡಲಾದ ಕೋಲದಲ್ಲಿ ಗುಳಿಗ ಇದೇ ಕಾಮಗಾರಿ ವಿಚಾರವಾಗಿ ತನ್ನ ಕೋಪವನ್ನು ಹೊರಹಾಕಿದೆಯಂತೆ. ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಾತನ ನಿರ್ಲಕ್ಷ್ಯದ ಬಗ್ಗೆ ಶರವು ಮಹಾ ಗುಳಿಗ ಕೋಪದಿಂದಲೋ ಮುಂದೆ ದೊಡ್ಡ ಅನಾಹುತ ನಡೆಯಲಿದೆ ಎಂದು ಎಚ್ಚರಿಸಿದೆಯಂತೆ.
ಮೂರು ವರ್ಷಗಳ ಹಿಂದೆ 70 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದ್ದು, ಕೇವಲ 10% ಮಾತ್ರ ಕೆಲಸವಾಗಿದೆ. ಜೊತೆ ಗುತ್ತಿಗೆದಾರರಿಗೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿಕೊಂಡಿದ್ದು ಇದೀಗ ಕಾಮಗಾರಿ ಸಂಪೂರ್ಣ ಸ್ಥಗಿತವಾಗಿದೆ. ಸದ್ಯ ಅರ್ಧಕ್ಕೆ ಉಳಿದ ಕಾಮಗಾರಿ ಈಗ ಅಪಾಯದಲ್ಲಿದ್ದು ಮಣ್ಣು ಕುಸಿತದ ಭೀತಿ ಎದುರಾಗಿದೆ. ಮಲ್ಟಿ ಕಾರ್ ಪಾರ್ಕಿಂಗ್ ಕಾಮಗಾರಿ ಸದ್ಯಕ್ಕೆ ಸ್ಥಗಿತವಾಗಿದ್ದು,ಕಾಮಗಾರಿ ಮುಂದುವರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಸೂಚನೆ ನೀಡಿದ್ದಾರೆ.
ಶರವು ಮಹಾಗಣಪತಿ ದೇವಸ್ಥಾನಕ್ಕೆ ಸಂಬಂಧಪಟ್ಟ ಶರವು ಮಹಾ ಗುಳಿಗ ಸ್ಥಾನ ಇದಾಗಿದ್ದು, ಇಲ್ಲಿನ ಜನ ಭಯ ಭಕ್ತಿಯಿಂದ ದೈವಕ್ಕೆ ತಲೆ ಬಾಗುತ್ತಾರೆ. ಆದ್ರೆ ದೈವದ ಕಾರ್ಣಿಕ ಅರಿಯದ ಗುತ್ತಿಗೆದಾರನ ಉದ್ಧಟತನದಿಂದ ಕಾಮಗಾರಿ ಸ್ಥಗಿತಗೊಂಡು ಸ್ಥಳೀಯ ವ್ಯಾಪಾರಿಗಳಿಗೆ ಸಂಕಷ್ಟ ಎದುರಾಗಿದೆ. ಆದ್ರೆ ನಿಮ್ಮೊಂದಿಗೆ ನಾನಿದ್ದೇನೆ ಎಂದು ಅಭಯ ನೀಡಿದ ದೈವ ಇಲ್ಲೊಂದು ಗಂಡಾಂತರ ನಡೆಯಲಿದೆ ಎಂದು ಹೇಳಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಇದಕ್ಕೆ ಇಂಬು ನೀಡುವಂತೆ ಈಗಾಗಲೆ ಇಲ್ಲಿನ ಮಣ್ಣಿನ ಗೋಡೆ ಕುಸಿಯುತ್ತಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.
ಎಷ್ಟೇ ಪ್ರಯತ್ನಿಸಿದರೂ ಕಾಮಗಾರಿ ನಡೆಸಲು ಅಸಾಧ್ಯವಾಗದ ಪರಿಸ್ಥಿತಿ ಉಂಟಾದ ಕಾರಣ ಗುಳಿಗನ ಕೋಪ ತಣಿಸಲು ಇಂಜಿನಿಯರ್‌ಗಳು ಗುಳಿಗ ಕ್ಷೇತ್ರದ ಮೊರೆ ಹೋಗಲು ನಿರ್ಧರಿಸಿದ್ದಾರೆ. ಸಂಕ್ರಾಂತಿಯ ಸಂದರ್ಭದಲ್ಲಿ ಗುಳಿಗನಿಗೆ ವಿಶೇಷ ಪೂಜೆ ಸಲ್ಲಿಸಿ ಕಾಮಗಾರಿ ನಡೆಸಲು ಅನುವು ಕೋರಿ ಸಾಮೂಹಿಕ ಪ್ರಾರ್ಥನೆ ನಡೆಸಲಿದ್ದಾರೆ.