Sunday, July 21, 2024
Homeರಾಜ್ಯಉತ್ತಮ ಪೋಷಕತ್ವವು ಅತ್ಯಂತ ಶ್ರೇಷ್ಠವಾದ ದೇಶಸೇವೆ : ಡಾ. ವಿರೂಪಾಕ್ಷ ದೇವರಮನೆ

ಉತ್ತಮ ಪೋಷಕತ್ವವು ಅತ್ಯಂತ ಶ್ರೇಷ್ಠವಾದ ದೇಶಸೇವೆ : ಡಾ. ವಿರೂಪಾಕ್ಷ ದೇವರಮನೆ

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ́ವಿವೇಕ ಸಂಕಲ್ಪ-2024ʼ ಪೋಷಕರ ಸಮಾವೇಶ ಹಾಗೂ ಕಾಲೇಜು ಪ್ರಾರಂಭೋತ್ಸವ

“ಇಂದಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಸವಾಲುಗಳಿವೆ. ಪರಿಸರದ ವಿವಿಧ ಆಕರ್ಷಣೆಗಳ ಮಧ್ಯದಲ್ಲಿ
ವಿದ್ಯಾರ್ಥಿಗಳು ಬದುಕಬೇಕಾಗಿದೆ. ಪೋಷಕರು ವಿದ್ಯಾರ್ಥಿಗಳ ಅಂತರಂಗವನ್ನು ಅರಿತುಕೊಳ್ಳುತ್ತಾ, ಅವರು
ಉತ್ತಮ ಜೀವನ ರೂಪಿಸಿಕೊಳ್ಳುವಲ್ಲಿ ಸಹಕಾರವನ್ನು ನೀಡಬೇಕಾಗಿದೆ. ಯಾವ ಮಗುವಿಗೆ ತಂದೆ,
ತಾಯಿಯ ಪ್ರೀತಿ, ಮಮತೆ, ವಿಶ್ವಾಸ ದೊರಕುವುದೋ, ಆ ಮಗು ಯಾವುದೇ ದುಷ್ಚಟಗಳಿಗೆ
ಬಲಿಯಾಗುವುದಿಲ್ಲ. ಆದುದರಿಂದ ಉತ್ತಮ ಪೋಷಕತ್ವವು ಅತ್ಯಂತ ಶ್ರೇಷ್ಠವಾದ ದೇಶ ಸೇವೆ” ಎಂದು
ಖ‍್ಯಾತ ಮನೋ ವೈದ್ಯರು ಹಾಗೂ ಲೇಖಕರಾದ ಡಾ. ವಿರೂಪಾಕ್ಷ ದೇವರಮನೆ ಅವರು ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪ್ರಥಮ ಪಿಯುಸಿ ವಿಜ್ಞಾನ, ವಾಣಿಜ್ಯ ಹಾಗೂ
ಕಲಾ ವಿಭಾಗಗಳ ವಿದ್ಯಾರ್ಥಿ-ಪೋಷಕರ ಸಮಾವೇಶ ʼವಿವೇಕ ಸಂಕಲ್ಪ-2024ʼ ರಲ್ಲಿ ಪಾಲ್ಗೊಂಡು
ಪೋಷಕರನ್ನುದ್ದೇಶಿಸಿ ಮಾತನಾಡಿದರು. ಹದಿಹರೆಯದ ವಯಸ್ಸಿನ ಮಕ್ಕಳಲ್ಲಿ ಸಾಕಷ್ಟು ಶಾರೀರಿಕ
ಹಾಗೂ ಮಾನಸಿಕ ಬದಲಾವಣೆಗಳು ಆಗುತ್ತಿರುತ್ತವೆ. ಈ ಹಂತದಲ್ಲಿ ಪೋಷಕರು ಮಕ್ಕಳ ಮಾನಸಿಕ
ಬದಲಾವಣೆಗಳನ್ನು ಅರ್ಥೈಸಿಕೊಂಡು ಅವರ ಭಾವನೆಗಳಿಗೆ ಸ್ಪಂದಿಸಬೇಕಾಗುತ್ತದೆ. ಪೋಷಕರು ತಮ್ಮ
ಕೆಲಸದ ಒತ್ತಡಗಳನ್ನು ಬದಿಗಿರಿಸಿ ಅವರ ಜತೆ ನಿರಂತರ ಸಂಪರ್ಕ, ಸಂವಹನವನ್ನು ಮಾಡಬೇಕು. ಮಕ್ಕಳು
ಮುಕ್ತವಾಗಿ ತಮ್ಮ ಭಾವನೆಗಳನ್ನು ಪೋಷಕರಲ್ಲಿ ಹಂಚಿಕೊಳ್ಳಬೇಕು. ಇಂತಹ ಪರಿಸರವನ್ನು ಪೋಷಕರು
ಮಾತ್ರ ನಿರ್ಮಿಸಲು ಸಾಧ್ಯ. ಮಕ್ಕಳನ್ನು ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗಿರಿಸದೆ, ಸಮಾಜದಲ್ಲಿ
ನೆನಪಿಡುವಂತಹ ಕಾರ್ಯಗಳನ್ನು ಮಾಡಿಸುವಲ್ಲಿ ಪೋಷಕರ ಬೆಂಬಲ ಅತೀ ಅಗತ್ಯವಾಗಿರುತ್ತದೆ ಎಂದು
ಕಿವಿಮಾತನ್ನು ಹೇಳಿದರು. ವಿಶೇಷ ಉಪನ್ಯಾಸದ ಬಳಿಕ ಪೋಷಕರೊಂದಿಗೆ ಸಂವಾದವನ್ನು ನಡೆಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ
ಅಧ್ಯಕ್ಷರಾದ ಪಿ. ರವೀಂದ್ರ ಇವರು ಮಾತನಾಡುತ್ತಾ ಪ್ರತಿ ವಿದ್ಯಾರ್ಥಿಯು ವಿಭಿನ್ನ ರೀತಿಯಲ್ಲಿ ಸಮಾಜಕ್ಕೆ
ಕೊಡುಗೆಯನ್ನು ನೀಡಬೇಕೆಂಬ ಪೋಷಕರ ಕನಸಿಗೆ ವಿದ್ಯಾಸಂಸ್ಥೆ, ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ
ಬೆಂಬಲ ಕೊಡುವಲ್ಲಿ, ಉತ್ತಮ ಸಹಕಾರದ ಭರವಸೆಯನ್ನಿತ್ತರು. ಭಾರತೀಯ ಆಚಾರ-ವಿಚಾರ, ಸಂಸ್ಕೃತಿಯ
ಮೇಲೆ ತಲೆಯೆತ್ತಿದ ಸಂಸ್ಥೆಗೆ ಸುಮಾರು ಏಳಕ್ಕಿಂತಲೂ ಹೆಚ್ಚಿನ ರಾಜ್ಯಗಳಿಂದ ಇಪ್ಪತ್ತೇಳು ಜಿಲ್ಲೆಗಳಿಂದ
ವಿದ್ಯಾರ್ಥಿಗಳು ಸೇರ್ಪಡೆಗೊಂಡಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ವಿದ್ಯಾರ್ಥಿಗಳು ವಯಸ್ಸಿನ
ಆಕರ್ಷಣೆಯ ದೌರ್ಬಲ್ಯದ ಇಳಿಜಾರಿಗೆ ಕಾಲಿಡದೆ, ಉತ್ತಮ ಬದುಕನ್ನು ರೂಪಿಸಿಕೊಳ್ಳುವ ಬಗೆಗೆ ಗಮನಹರಿಸಬೇಕೆಂದು ನೈಜ ಉದಾಹರಣೆಯೊಂದಿಗೆ ಮಕ್ಕಳಿಗೆ ಮನವರಿಕೆ ಮಾಡಿದರು. ಪಿಯುಸಿಯು ಬಹಳ
ನಿರ್ಣಾಯಕ ಹಂತವಾಗಿದ್ದು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪ್ರಜ್ಞಾವಂತ ಪೋಷಕರು ಈ ಸಂಸ್ಥೆಯನ್ನು ಆಯ್ಕೆ ಮಾಡಿರುವುದಕ್ಕೆ ಕೃತಜ್ಞತೆಯನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಹೇಶ್‌
ನಿಟಿಲಾಪುರ ಅವರು ವಿದ್ಯಾರ್ಥಿಗಳಿಗೆ ಕಾಲೇಜು ವ್ಯವಸ್ಥೆಗಳ ಕುರಿತು ವಿವರವಾದ ಮಾಹಿತಿಯನ್ನು
ನೀಡಿದರು. ಕಾಲೇಜು ವಿದ್ಯಾರ್ಥಿಗಳು, ಸಂಸ್ಥೆಯ ಧ್ಯೇಯ ಮತ‍್ತು ಶಿಕ್ಷಣಾವಕಾಶಗಳನ್ನು ಪರಿಚಯಿಸುವ
ವಿವೇಕಾಂತರಂಗ-ಯಕ್ಷ-ಗಾನ ತರಂಗ ಎಂಬ ಸಂದರ್ಭೋಚಿತ ಸಾಂಸ್ಕೃತಿಕ ತುಣುಕನ್ನು ಪ್ರದರ್ಶಿಸಿದರು.
ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ವೈದೇಹಿ ಸಭಾಂಗಣದಲ್ಲಿ ಹಾಗೂ ವಾಣಿಜ್ಯ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ನೇತಾಜಿ ಸಭಾಭವನದಲ್ಲಿ ಮುಂದಿನ ಶೈಕ್ಷಣಿಕ ಚಟುವಟಿಕೆಗಳ ಕುರಿತು
ವಿವರವಾದ ಸೂಚನೆಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ವತ್ಸಲಾ ರಾಜ್ಞಿ, ಡಾ. ಕೆ.ಎನ್.‌
ಸುಬ್ರಹ್ಮಣ್ಯ, ವಸತಿ ನಿಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ರಮೇಶ್‌ ಪ್ರಭು, ವಿವೇಕಾನಂದ
ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಸತೀಶ್‌ ರಾವ್‌ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸರಸ್ವತಿ ವಂದನೆಯೊಂದಿಗೆ ಪ್ರಾರಂಭಿಸಲಾಯಿತು. ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ದೇವಿಚರಣ್‌ ರೈ ನೆರೆದವರನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಉಪನ್ಯಾಸಕಿಯರಾದ ಪುಷ್ಪಲತಾ ಹಾಗೂ ಸವಿತಾ ಕುಮಾರಿ ಇವರು ನಿರೂಪಿಸಿ, ವಂದಿಸಿದರು.

RELATED ARTICLES
- Advertisment -
Google search engine

Most Popular