ಸುರತ್ಕಲ್: ಗೂಗಲ್ ಮ್ಯಾಪ್ ಮೂಲಕ ದಾರಿ ಹುಡುಕಿಕೊಂಡು ತಲುಪಬೇಕಾದ ಸ್ಥಳಕ್ಕೆ ತಲುಪುವುದು ಈಗಿನ ದಿನಗಳಲ್ಲಿ ಸಾಮಾನ್ಯ. ಆದರೆ ಗೂಗಲ್ ಮ್ಯಾಪನ್ನು ಸಂಪೂರ್ಣ ನಂಬಿದರೆ ಕೆಲಸ ಕೆಟ್ಟಿತೆಂದೇ ಹೇಳಬೇಕು. ಯಾಕೆಂದರೆ, ಪಣಂಬೂರು ಬೀಚ್‌ಗೆ ಹೋಗಲೆಂದು ಗೂಗಲ್ ಮ್ಯಾಪ್ ಹಾಕಿಕೊಂಡು ಹೋದವರಿಗೆ ಅಚ್ಚರಿ ಕಾದಿದೆ. ಪಣಂಬೂರು ಬೀಚ್‌ಗೆ ಗೂಗಲ್ ಮ್ಯಾಪ್ ಹಾಕಿಕೊಂಡು ಹೊರಟ ಪ್ರವಾಸಿಗರಿಗೆ ಕಿ.ಮೀ. ಸುತ್ತಿಸಿ, ಅಪಾಯಕಾರಿ ಮೀನಕಳಿಯ ಡೆಡ್ ಎಂಡ್ ಬೀಚ್‌ಗೆ ತಂದು ನಿಲ್ಲಿಸಿದೆ.
ಇಂತಹ ಹಲವು ಪ್ರಕರಣಗಳು ಸಂಭವಿಸಿದುದರಿಂದ, ಈಗ ಮೀನಕಳಿಯ ಬೀಚ್‌ನಲ್ಲಿ ಹೋಮ್ ಗಾರ್ಡ್ ಒಬ್ಬರನ್ನು ನಿಯೋಜಿಸಲಾಗಿದೆ. ಗೂಗಲ್ ಮ್ಯಾಪ್ ನಂಬಿ ಇಲ್ಲಿಗೆ ಬರುವವರಿಗೆ ಅವರು ಸೂಕ್ತ ಮಾರ್ಗದರ್ಶನ ನೀಡಿ, ಹಿಂದಕ್ಕೆ ಕಳುಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಪಣಂಬೂರು ಬೀಚ್ ಪಾರ್ಕಿಂಗ್ ಎಂದು ತೋರಿಸಿದರೆ ಮಾತ್ರ ಪಣಂಬೂರು ಬೀಚ್ ರಸ್ತೆಯನ್ನು ಗೂಗಲ್ ಮ್ಯಾಪ್ ತೋರಿಸುತ್ತಿದೆ. ಹೀಗಾಗಿ ಇನ್ನು ಮುಂದೆ ಪಣಂಬೂರು ಬೀಚ್‌ಗೆ ತೆರಳುವವರು ಈ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ.
ಪ್ರವಾಸೋದ್ಯಮ ಇಲಾಖೆ ಈ ಬಗ್ಗೆ ಗಮನ ಹರಿಸಿ ಗೂಗಲ್ ಮ್ಯಾಪ್‌ನಲ್ಲಿರುವ ಈ ಲೋಪದೋಷವನ್ನು ಸರಿಪಡಿಸಬೇಕಾಗಿದೆ.