ಮಂಡ್ಯ: ಅನ್ಯಕೋಮಿನ ಯುವಕರ ತಂಡ ಹಿಂದೂಗಳ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸಿದ ಘಟನೆ ನಾಗಮಂಗಲ ತಾಲೂಕಿನ ಬೆಳ್ಳೂರು ಪಟ್ಟಣದಲ್ಲಿ ನಡೆದಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾತ್ರಿಯೇ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಬೆಳ್ಳೂರು ಪೊಲೀಸ್ ಠಾಣೆ ಬಳಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಬೈಕ್ ಟಚ್ ಮಾಡಿಕೊಂಡು ಓವರ್ ಟೇಕ್ ಮಾಡಿದ್ದ ಇಬ್ಬರು ಮುಸ್ಲಿಂ ಯುವಕರನ್ನು ಅಭಿಷೇಕ್ ಎಂಬಾತ ಪ್ರಶ್ನಿಸಿದ್ದನೆನ್ನಲಾಗಿದೆ. ಅದೇ ದ್ವೇಷದಿಂದ ಹತ್ತಾರು ಜನರನ್ನು ಕಟ್ಟಿಕೊಂಡು ಬಂದು ಅಭಿಷೇಕ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಅಲ್ಲದೆ ಮಾರಕಾಸ್ತ್ರ ಹಿಡಿದುಕೊಂಡು ಕೆಲವು ಹಿಂದೂಗಳ ಮನೆಗೆ ನುಗ್ಗಿ ಬೆದರಿಕೆ ಹಾಕಿದ್ದರೆನ್ನಲಾಗಿದೆ. ಈ ವೇಳೆ ಗಲಾಟೆ ನಡೆದಿದ್ದು, ಗಾಯಾಳುಗಳನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಮಹಿಳೆಯರು ಸೇರಿ ನೂರಾರು ಮಂದಿ ಠಾಣೆ ಎದುರು ಜಮಾಯಿಸಿ ಪ್ರತಿಭಟಿಸಿದ್ದಾರೆ. ಗ್ರಾಮಸ್ಥರ ಮನವಿ ಆಲಿಸಿ ಡಿವೈಎಸ್ಪಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.