Saturday, June 14, 2025
HomeUncategorizedಮರಾಟಿಗರ ನ್ಯಾಯಯುತ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧಮೂಡುಬಿದಿರೆಯಲ್ಲಿ ಕರಾವಳಿ ಮರಾಟಿ ಸಮಾವೇಶ ಉದ್ಘಾಟಿಸಿ ಸಚಿವ ಎಚ್.ಸಿ.ಮಹಾದೇವಪ್ಪ...

ಮರಾಟಿಗರ ನ್ಯಾಯಯುತ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧ
ಮೂಡುಬಿದಿರೆಯಲ್ಲಿ ಕರಾವಳಿ ಮರಾಟಿ ಸಮಾವೇಶ ಉದ್ಘಾಟಿಸಿ ಸಚಿವ ಎಚ್.ಸಿ.ಮಹಾದೇವಪ್ಪ ಭರವಸೆ

ಮಂಗಳೂರು: ಕರಾವಳಿಯ ಮರಾಟಿ ಸಮುದಾಯದ ನ್ಯಾಯಯುತ ಬೇಡಿಕೆಗಳನ್ನು ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಪರಿಶೀಲಿಸಿ, ಮುಖ್ಯಮಂತ್ರಿ ಯವರ ಗಮನಕ್ಕೆ ತಂದು ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹಾದೇವಪ್ಪ ಹೇಳಿದರು.
ಮೂಡುಬಿದಿರೆ ವಿದ್ಯಾಗಿರಿ ಆಳ್ವಾಸ್ ಕಾಲೇಜು ಸಭಾಂಗಣದಲ್ಲಿ ಭಾನುವಾರ ನಡೆದ ‘ಗದ್ದಿಗೆ’ ಕರಾವಳಿ ಮರಾಟಿ ಸಮಾವೇಶ 2024 ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನದ ಆಶಯವನ್ನು ಈಡೇರಿಸುವಲ್ಲಿ ಚುನಾಯಿತ ಪ್ರತಿನಿಧಿಗಳು ರಾಜಕೀಯ ಬಿಟ್ಟು ಕೆಲಸ ಮಾಡಬೇಕು. ಶಿಕ್ಷಣದ ಮೂಲಕ ಆರ್ಥಿಕ ಸದೃಢತೆ ಸಾಧ್ಯ. ರಾಜಕೀಯ ಉದ್ದೇಶ ಇಲ್ಲದೆ ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರದ ಗ್ಯಾರಂಟಿ ಯೋಜನೆ ವರದಾನವಾಗಿದೆ ಎಂದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಸಮಾವೇಶ ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಸಮುದಾಯದ ನ್ಯಾಯಯುತ ಬೇಡಿಕೆ ಈಡೇರಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದರು.
‘ಗದ್ದಿಗೆ’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಮಹಾರಾಷ್ಟ್ರದಿಂದ ವಲಸೆ ಬಂದಿರುವ ಮರಾಟಿಗರು ಕರ್ನಾಟಕದಲ್ಲಿ ಶೇ.6.9 ರಷ್ಟಿದ್ದಾರೆ. ಸ್ವಾಭಿಮಾನಿ, ಶ್ರಮ ಜೀವಿಗಳಾಗಿರುವ ಮರಾಟಿಗರು ಗದ್ದಿಗೆ ಸಮಾವೇಶದ ಮೂಲಕ ಸಮಾಜದಲ್ಲಿ ಕ್ರಿಯಾಶೀಲರಾಗಲು ಪ್ರೇರಣೆಯಾಗಲಿ ಎಂದರು.
ಜಮ್ಮು ಮತ್ತು ಕಾಶ್ಮೀರದ ಪ್ರಧಾನ ಕಾರ್ಯದರ್ಶಿ, ಸಮಾವೇಶದ ಅಧ್ಯಕ್ಷ ಎಚ್.ರಾಜೇಶ್ ಪ್ರಸಾದ್ ಅಧ್ಯತೆ ವಹಿಸಿದ್ದರು. ದೇಶ ಸ್ವಾತಂತ್ರ್ಯ ಪಡೆದು ಏಳು ದಶಕವಾದರೂ ಮರಾಟಿ ಸಮಾಜ ಹಿಂದುಳಿದಿದೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಈ ಮೂಲಕ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯ ಎಂದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಉದ್ಯಮಿ ಶಶಿಧರ ಶೆಟ್ಟಿ ಬರೋಡ ಮುಖ್ಯ ಅತಿಥಿಗಳಾಗಿದ್ದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ಕೇಂದ್ರ ಸರ್ಕಾರದ ನಿವೃತ್ತ ಕೃಷಿ ನಿರ್ದೇಶಕ ಡಾ.ಬಿ.ಜಿ.ನಾಯ್ಕ, ಕರ್ನಾಟಕ ಮರಾಟಿ ಸಂಘದ ಅಧ್ಯಕ್ಷೆ ಶೋಭಾವತಿ ಎಂ.ಟಿ., ದಕ್ಷಿಣ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್.ವಿಶ್ವನಾಥ ನಾಯ್ಕ, ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಶೋಕ್ ನಾಯ್ಕ ಕೆದಿಲ, ಸಮ್ಮೇಳನದ ಸಂಚಾಲಕ ಡಾ.ಬಾಲಕೃಷ್ಣ ಸಿ.ಎಚ್., ಕೂಡ್ಲಿ ಮರಾಟಿ ಸಮಾಜದ ಅಧ್ಯಕ್ಷ ರಾಮಚಂದ್ರ ನಾಯ್ಕ್, ಕೆ. ಚಂದ್ರಶೇಖರ ನಾಯ್ಕ್, ಎಸ್‌. ಎಸ್. ಪರಮೇಶ್ವರ, ಸಮ್ಮೇಳನದ ಸಹಸಂಚಾಲಕ ಪ್ರಕಾಶ್ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.
ಸಮ್ಮೇಳನದ ಕಾರ್ಯಾಧ್ಯಕ್ಷ ರಾಮಚಂದ್ರ ಕೆಂಬಾರೆ ಅವರು ಮನವಿ ವಾಚಿಸಿದರು.
ಸಮಾವೇಶದ ಗೌರವಾಧ್ಯಕ್ಷ ಡಾ.ಕೆ.ಸುಂದರ ನಾಯ್ಕ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶಂಕರ ನಾಯ್ಕ ವಂದಿಸಿದರು.
ಬಳಿಕ ಶಿಕ್ಷಣ ಮತ್ತು ಯುವಜನತೆ ವಿಷಯದಲ್ಲಿ ಡಾ.ಎಂ.ಮೋಹನ ಆಳ್ವ, ಮರಾಟಿಗರ ಆಚಾರ, ವಿಚಾರ ಮತ್ತು ಸಂಸ್ಕಾರ ವಿಷಯದಲ್ಲಿ ವಕೀಲ ಎನ್.ಎಸ್. ಮಂಜುನಾಥ್, ಮರಾಟಿ ಭಾಷೆ ಉಳಿಸುವುದು ಮತ್ತು ಬೆಳೆಸುವುದು ವಿಷಯದಲ್ಲಿ ದೈಹಿಕ ಶಿಕ್ಷಕಿ ರತಿ ಪ್ರಭಾಕರ ನಾಯ್ಕ, ಮರಾಟಿಗರ ಸಮಸ್ಯೆ ಮತ್ತು ಸವಾಲುಗಳು ವಿಷಯದಲ್ಲಿ ವಕೀಲ ಪ್ರವೀಣ್ ಕುಮಾರ್ ವಿಚಾರ ಮಂಡಿಸಿದರು.

RELATED ARTICLES
- Advertisment -
Google search engine

Most Popular