ಕುಂದಾಪುರ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು ವಲಯ, ಸರಕಾರಿ ಹಿರಿಯ ಪ್ರಾಥಮಿಕ ಮಂಕಿ ಶಾಲೆ ದತ್ತು ಸ್ವೀಕಾರ ಕಾರ್ಯಕ್ರಮ ಯು.ರಾಜೇಶ ಕಾರಂತ್ ಉಪ್ಪಿನಕುದ್ರು ಅವರ ಸಾರಥ್ಯದಲ್ಲಿ ಸೋಮವಾರ ಮಂಕಿ ಶಾಲೆಯಲ್ಲಿ ನಡೆಯಿತು.ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ತನ್ನ ತಾಯಿ ಕಲಿತ ಶಾಲೆಯನ್ನು ನೆನೆದು ದತ್ತು ಸ್ವೀಕಾರ ಮಾಡಿರುವುದು ಶ್ಲಾಘನೀಯ ಕೆಲಸವಾಗಿದೆ. ದಾನಿಗಳ ಸಹಕಾರದಿಂದ ಬೈಂದೂರು ಕ್ಷೇತ್ರದಲ್ಲಿ ಸರಕಾರಿ ಶಾಲೆಗಳನ್ನು ಬಲಗೊಳಿಸುವ ಕೆಲಸ ಮಾಡಲಾಗುತ್ತಿದ್ದು. ದಾನಿಗಳ ವಿಶಿಷ್ಟ ಕಲ್ಪನೆಯೊಂದಿಗೆ ಸರಕಾರಿ ಶಾಲೆಗಳು ಬೆಳಕನ್ನು ಕಾಣಲಿದೆ ಎಂದು ಹೇಳಿದರು. ಯು.ರಾಜೇಶ ಕಾರಂತ ಉಪ್ಪಿನಕುದ್ರು ಅವರು ಮಂಕಿ ಶಾಲೆಯನ್ನು ದತ್ತು ಸ್ವೀಕಾರ ಮಾಡಿ ಮಾತನಾಡಿ, ಮಾತ್ರಾಶ್ರೀ ಅವರ ಆಶಯ ಮತ್ತು ಶಾಲೆ ಮೇಲಿನ ಅಭಿಮಾನದಿಂದ ಮಂಕಿ ಶಾಲೆಯನ್ನು ದತ್ತು ಸ್ವೀಕಾರ ಮಾಡಲಾಗಿದೆ ಎಂದು ಹೇಳಿದರು. ಶಾಲೆಯನ್ನು ದತ್ತು ಸ್ವೀಕಾರ ಮಾಡಲು ಭಾಗ್ಯವನ್ನು ಒದಗಿಸಿಕೊಟ್ಟವರಿಗೆ ಧನದ್ಯವಾದವನ್ನು ಸಲ್ಲಿಸಿದರು. ಮಕ್ಕಳ ಶೈಕ್ಷಣಿಕ ಜೀವನಕ್ಕೆ ಸಹಕಾರಿ ಆಗುವಂತಹ ವಿದ್ಯಾ ದೇಗುಲವನ್ನು ಅಭಿವೃದ್ಧಿಗೊಳಿಸಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.
ಗುಜ್ಜಾಡಿ ಪಂಚಾಯಿತಿ ಅಧ್ಯಕ್ಷ ತಮ್ಮಯ್ಯ ದೇವಾಡಿಗ ಮಾತನಾಡಿ,1946 ರಲ್ಲಿ ಮಂಕಿ ಶಾಲೆ ಸ್ಥಾಪನೆಗೊಂಡಿದೆ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಂಕಿ ಶಾಲೆಯನ್ನು ರಾಜೇಶ್ ಕಾರಂತ ಅವರು ದತ್ತು ಸ್ವೀಕಾರ ಮಾಡಿರುವುದು ಊರಿನವರಿಗೆ ಬಹಳಷ್ಟು ಖುಷಿಕೊಟ್ಟಿದೆ. ಸರಕಾರಿ ಶಾಲೆಗಳು ಉಳಿದರೆ ಮಾತ್ರ ಗ್ರಾಮೀಣ ಪ್ರದೇಶದ ಜನರ ಮಕ್ಕಳು ಶಿಕ್ಷಣವಂತರಾಗಲು ಸಾಧ್ಯವಿದೆ ಎಂದು ಹೇಳಿದರು. ಶಾರದ ಕಾರಂತ ಉಪ್ಪಿನಕುದ್ರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಶಿಕ್ಷಣ ಸಂಯೋಜಕ ಯೋಗೀಶ್, ಶಿಕ್ಷಕ ಭಾಸ್ಕರ ಮಯ್ಯ, ಎಸ್‍ಡಿಎಂಸಿ ಅಧ್ಯಕ್ಷೆ ಸುಮತಿ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್, ಸ್ಪಂದನ ಯುವ ಸಂಘ ಅಧ್ಯಕ್ಷ ರಘು ಎಂ., ನಾರಾಯಣ ಕೆ ಗುಜ್ಜಾಡಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಗೀತಾ ಸ್ವಾಗತಿಸಿದರು.ಅಕ್ಷಯ ವಂದಿಸಿದರು.