ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯತಿನ 2024-25ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯನ್ನು ಕಡಂದಲೆ ಪಲ್ಕೆ ಶ್ರೀ ಗಣೇಶ ದರ್ಶನ ಸಭಾಂಗಣದಲ್ಲಿ ಜರುಗಿಸಲಾಯಿತು. ಈ ವೇಳೆ ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಅನುದಾನಿತ ಹೈಸ್ಕೂಲ್‌ನಲ್ಲಿ ಏಕಕಾಲಕ್ಕೆ ಎರಡು ಪದವಿ ಪಡೆದ ಬಗ್ಗೆ ಪ್ರಮಾಣ ಪತ್ರ ಹಾಜರುಪಡಿಸಿ ದೈಹಿಕ ಶಿಕ್ಷಕ ಹುದ್ದೆ ಪಡೆದಿರುವ ಕುರಿತು ಸಂಬಂಧಪಟ್ಟ ಇಲಾಖೆಯಿಂದ ಸೂಕ್ತ ತನಿಖೆ ನಡೆಸಬೇಕು ಎಂದು ಭಾಸ್ಕರ ಪಾಲಡ್ಕ ಇವರು ಗ್ರಾಮ ಸಭೆಗೆ ಮನವಿ ಸಲ್ಲಿಸಿದರು. ಸದ್ರಿಯವರ ಮನವಿಯನ್ನು ಸೂಕ್ತ ಕ್ರಮಕ್ಕಾಗಿ ಶಿಕ್ಷಣ ಇಲಾಖೆಗೆ ಕಳುಹಿಸುವಂತೆ ಸಭೆಯ ನೋಡಲ್ ಅಧಿಕಾರಿಯಾದ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ರತಿ ಅವರು ಮಾತನಾಡಿ, ಗರ್ಭಿಣಿ ಮತ್ತು ಬಾಣಂತಿಯವರಿಗೆ ಪೂರಕ ಆಹಾರ ನೀಡುವ ಬಗ್ಗೆ ಮತ್ತು ಭಾಗ್ಯಲಕ್ಷ್ಮಿ ಯೋಜನೆ, ಮಾತೃವಂದನೆ ಯೋಜನೆ, ಬಾಲ್ಯ ವಿವಾಹ ಮತ್ತು ಇತರ ವಿಷಯಗಳ ಕುರಿತು ವಿವರಿಸಿದರು.
ಮೆಸ್ಕಾಂ ಅಧಿಕಾರಿ ಜೂನಿಯರ್ ಎಂಜಿನಿಯರ್ ಮಮತಾ ಎಂ. ಅವರು ಮೆಸ್ಕಾಂಗೆ ಸಂಬಂಧಿಸಿದ ಗ್ರಾಮಸ್ಥರ ಸಮಸ್ಯೆಗಳ ಬಗ್ಗೆ ಕೇಳಿ ತಿಳಿದುಕೊಂಡರು. ರಸ್ತೆ ಬದಿಯ ಮರಗಳ ಗೆಲ್ಲು ಕಟಾವು ಮಾಡಲು ಮತ್ತು ಹಳೇ ತಂತಿ ಹಾಗೂ ಕಂಬಗಳನ್ನು ಬದಲಾಯಿಸವಂತೆ ಗ್ರಾಮಸ್ಥರು ಮನವಿ ಮಾಡಿದರು. ಮಳೆಗಾಲದಲ್ಲಿ ಲೈನ್‌ಮ್ಯಾನ್‌ಗಳ ಸೂಕ್ತ ಲಭ್ಯತೆ ಕುರಿತು ಗ್ರಾಮಸ್ಥರು ವಿನಂತಿಸಿದರು.
ಅರಣ್ಯ ಇಲಾಖೆ ಅಧಿಕಾರಿಯವರು ಅರಣ್ಯ ಇಲಾಖೆಗೆ ಸಂಬಂಧಿಸಿದ ಸವಲತ್ತುಗಳ ಕುರಿತು ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ವ್ಯಾಪ್ತಿಯ ಅಪಾಯಕಾರಿ ಮರಗಳ ತೆರವು ಮಾಡುವಂತೆ ಮತ್ತು ಪಂಚಾಯತ್‌ಗೆ ಮಂಜೂರಾದ ನಿವೇಶನದಲ್ಲಿ ಇರುವ ಮರಗಳ ತೆರವುಗೊಳಿಸಿ, ನಿವೇಶನಕ್ಕೆ ಅನುಕೂಲ ಮಾಡಿಕೊಡುವಂತೆ ಸಭೆಯಲ್ಲಿ ಸೂಚಿಸಿದರು. ಬಳಿಕ ಗ್ರಾಮಸ್ಥರಿಂದ ಸಲಹೆ ಸೂಚನೆಗಳನ್ನು ಪಡೆಯಲಾಯಿತು.
ಮಕ್ಕಂ ಮತ್ತು ಮಹಿಳಾ ಕಲ್ಯಾಣ ಇಲಾಖೆಯಿಂದ ಅಂಗನವಾಡಿ ಮೇಲ್ವಿಚಾರಕಿ ರತಿ, ಅರಣ್ಯ ಇಲಾಖೆಗೆಯ ಆರ್‌ಎಫ್‌ಒ ಮಂಜುನಾಥ ಗಾಣಿಗ, ಆರೋಗ್ಯ ಇಲಾಖೆಯ ಡಾ. ಅನಿಲ್ ಪಿಂಟೋ, ಮೆಸ್ಕಾಂ ಇಲಾಖೆಯ ಜೂನಿಯರ್ ಎಂಜಿನಿಯರ್ ಮಮತಾ ಎಂ., ಕಂದಾಯ ಇಲಾಖೆಯ ಕಡಂದಲೆ ಮತ್ತು ಪಾಲಡ್ಕ ಗ್ರಾಮದ ಗ್ರಾಮಕರಣಿಕರು ಅನಿಲ್ ಕುಮಾರ್ ಮುಂತಾದವರು ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ಮಾಹಿತಿ ನೀಡಿದರು. ಕೆಎಂಎಫ್ ಅಧ್ಯಕ್ಷ ಸುಚರಿತ ಶೆಟ್ಟಿ, ಪಿಡಿಒ ರಕ್ಷಿತ ಡಿ., ಅಧ್ಯಕ್ಷೆ ಅಮಿತಾ, ಉಪಾಧ್ಯಕ್ಷ ಪ್ರವೀಣ್ ಸಿಕ್ವೇರ, ಪಂಚಾಯತ್ ಸದಸ್ಯರು, ಸಿಬ್ಬಂದಿ, ಗ್ರಾಮಸ್ಥರು ಈ ವೇಳೆ ಉಪಸ್ಥಿತರಿದ್ದರು.


