ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರವು ರಾಜ್ಯದ ಹೆಣ್ಣು ಮಕ್ಕಳಿಗಾಗಿ ತನ್ನ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಾಗ ವಿರೋಧ ಪಕ್ಷದವರು ಬಾಯಿಗೆ ಬಂದಂತೆ ಅಪಸ್ವರ ಎತ್ತಿದ್ದರು. ಮನೆಯಲ್ಲಿ ಅತ್ತೆ, ಸೊಸೆ ಇದ್ದರೆ ಗೃಹಲಕ್ಷ್ಮಿ ಹಣ ಯಾರಿಗೆ ಸಂದಾಯವಾಗುತ್ತದೆ? ಅತ್ತೆ-ಸೊಸೆ ಜುಟ್ಟಿಗೆ ಜುಟ್ಟು ಹಿಡಿದು ಕಾದಾಡುತ್ತಾರೆ ಎಂದೆಲ್ಲಾ ವಿರೋಧಿಗಳು ಕೊಂಕು ನುಡಿದಿದ್ದರು. ಆದರೆ, ಅದಕ್ಕೆ ತದ್ವಿರುದ್ಧವಾದ ಸುದ್ದಿಯೊಂದು ಬಂದಿದ್ದು, ಅದರಲ್ಲೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಿಂದಲೇ ಬಂದಿದೆ. ಗೃಹಲಕ್ಷ್ಮಿ ಹಣದಿಂದ ಅತ್ತೆಯೊಬ್ಬರು ಸೊಸೆಗೆ ಜನರಲ್ ಸ್ಟೋರ್ ಮತ್ತು ಫ್ಯಾನ್ಸಿ ಹಾಕಿಕೊಟ್ಟು ಮಾದರಿಯಾಗಿದ್ದಾರೆ.
ಗೃಹಲಕ್ಷ್ಮಿ ಹಣದಿಂದ ಒಂದು ಪೈಸೆಯನ್ನೂ ಖರ್ಚು ಮಾಡದೆ, ಕಳೆದ 10 ತಿಂಗಳಿನಿಂದ ಬಂದ 20,000 ರೂ. ಹಣವನ್ನು ಹಾಗೇ ಕೂಡಿಟ್ಟು ಅದನ್ನು ಸೊಸೆಯ ಕೈಗೆ ಕೊಟ್ಟಿದ್ದಾರೆ. ನೀನೇ ನಮ್ಮ ಮನೆಯ ಗೃಹಲಕ್ಷ್ಮಿ! ನಮಗೆ ಊರುಗೋಲು ಆಗಲು ನಾಡಿನ ದೊರೆ ಸಿದ್ದರಾಮಣ್ಣ ಕೊಟ್ಟಿರುವ ದುಡ್ಡು ಇದೆ. ಅದನ್ನು ಹೊಂದಿಸಿಕೊಂಡು ಒಂದು ವ್ಯಾಪಾರ ಶುರು ಮಾಡು ಎಂದು ತುಂಬು ಹೃದಯದಿಂದ ಹಾರೈಸಿ, ಸಿದ್ದರಾಮಯ್ಯ ಅವರನ್ನು ನೆನಪಿಸಿಕೊಳ್ಳುತ್ತಾ ಸೊಸೆಯ ಕೈಗೆ ಅಷ್ಟೂ ದುಡ್ಡನ್ನು ‘ಹಸ್ತಾಂತರ’ ಮಾಡಿದ್ದಾರೆ.
ಅತ್ತೆ-ಸೊಸೆ ಜಗಳ ಸಾಮಾನ್ಯವೆಂಬಂತೆ ಕೇಳಿಬರುತ್ತಿತ್ತು. ಆದರೆ, ಈಗ ಗೃಹಲಕ್ಷ್ಮಿ ಯೋಜನೆಯಿಂದ ಅತ್ತೆ-ಸೊಸೆ ಅನ್ಯೋನ್ಯವಾಗಿರುವಂತೆ ಮಾಡಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರ ಸ್ವಕ್ಷೇತ್ರ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕು ನೀರಲಗಿ ಗ್ರಾಮದಲ್ಲಿ ಸೊಸೆ ಹೊರಗೆ ಕೆಲಸಕ್ಕೆ ಹೋಗಿ ಕಷ್ಟಪಡುವುದು ಬೇಡವೆಂದು, ತಾವು ಕೂಡಿಟ್ಟ ಗೃಹಲಕ್ಷ್ಮಿ ಯೋಜನೆಯ ಹಣದಲ್ಲೇ ಮನೆಯಲ್ಲಿ ಫ್ಯಾನ್ಸಿ ಸ್ಟೋರ್ ತೆರೆದುಕೊಟ್ಟಿದ್ದಾರೆ. ಅತ್ತೆ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.