ಉಡುಪಿ, ಆ.25: ಸಂಘಟನೆಯಿಂದ ಸೇವೆ ಇದು ಜಿಎಸ್‌ಬಿ ಹಿತರಕ್ಷಣಾ ವೇದಿಕೆಯ ವಿಶೇಷವಾಗಿದ್ದು, ಸಂಘಟನೆ ಜತೆಗೆ ಸಮಾಜಮುಖಿ ಕಾರ್ಯಗಳಿಗೂ ಒತ್ತು ನೀಡಿ ಕಟ್ಟಕಡೆಯ ವ್ಯಕ್ತಿಗೂ ಸ್ಪಂದಿಸುವ ಮೌಲ್ಯದ ಮೂಲಕ ಇಡೀ ಸಮಾಜಕ್ಕೆೆ ಮಾದರಿ ಸಂಘಟನೆಯಾಗಿದೆ ಎಂದು ಪುತ್ತೂರಿನ ಆನಂದಾಶ್ರಮ ಸೇವಾ ಟ್ರಸ್ಟ್‌ನ ಸಂಸ್ಥಾಪಕಿ ಡಾ. ಪಿ.ಗೌರಿ ಪೈ ಹೇಳಿದರು.
ಜಿಲ್ಲಾ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ, ಮುದರಂಗಡಿ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ರವಿವಾರ ಅಂಬಾಗಿಲಿನ ಅಮೃತ್ ಗಾರ್ಡನ್ ಸಭಾಭವನದಲ್ಲಿ ಜರಗಿದ ಜಿಎಸ್‌ಬಿ ವಿದ್ಯಾರ್ಥಿ ವೇತನ ವಿತರಣೆ, ಶೈಕ್ಷಣಿಕ ದತ್ತು ಸ್ವೀಕಾರ ಯೋಜನೆ, ಶೈಕ್ಷಣಿಕ ಪ್ರೇರಣಾ ಕಾರ್ಯಾಗಾರ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ದಿಕ್ಸೂಚಿ ಭಾಷಣಗೈದ ಬೆಂಗಳೂರು ಆರ್‌ಎನ್‌ಎಸ್ ಸಮೂಹ ಸಂಸ್ಥೆೆ ಸಿಎಒ ಡಾ ಸುಧೀರ್ ಕೆ. ಎಲ್. ಮಾತನಾಡಿ, ತಂದೆ ತಾಯಂದಿರು, ಗುರುಗಳು ಮತ್ತು ಲೋಕದ ಋಣವನ್ನು ಎಂದಿಗೂ ಮರೆಯದೇ ಜೀವಮಾನದಲ್ಲಿ ತೀರಿಸಬೇಕು. ವಿದ್ಯಾರ್ಥಿ ವೇತನ ಎಲ್ಲರೂ ಸದ್ಬಳಕೆ ಮಾಡಿಕೊಂಡು ಉದ್ಯೋಗ, ಉದ್ದಿಮೆ ಆರಂಭಿಸಿದ ಅನಂತರ ಒಂದಿಷ್ಟು ಪಾಲು ಸಮಾಜಕ್ಕೂ ಸಮರ್ಪಿಸಬೇಕು ಎಂದು ಕಿವಿಮಾತು ಹೇಳಿದರು.
ನಿವೃತ್ತ ಲೆಕ್ಕ ಪರಿಶೋಧಕ ಕೆ. ಕಮಲಾಕ್ಷ ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಟ್ಟು ಮರೆಯಬೇಕು ಮೆರೆಯಬಾರದು. ಸಮಾಜದ ಋಣವನ್ನು ಅಗತ್ಯವಿರುವರಿಗೆ ಕೊಡುವ ಮೂಲಕ ಹಿಂದಿರುಗಿಸಬೇಕು ಎಂದು ಸಲಹೆ ನೀಡಿದರು. ಜಿಎಸ್‌ಬಿ ಹಿತರಕ್ಷಣಾ ವೇದಿಕೆಯು ಸಮಾಜದಲ್ಲಿ ಉಳ್ಳವರು ಮತ್ತು ಇಲ್ಲದವರ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಿದೆ ಎಂದು ಬಣ್ಣಿಸಿದರು.
ಬೆಂಗಳೂರಿನ ಆಭರಣ ಟೈಮ್‌ಲೆಸ್ ಜುವೆಲರಿ ಪ್ರೈ.ಲಿ. ಆಡಳಿತ ನಿರ್ದೇಶಕ ಡಾ ಪ್ರತಾಪ್ ಮಧುಕರ್ ಕಾಮತ್ , ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಟ್ರಸ್ಟಿ ಎಂ.ಕಿರಣ್ ಪೈ, ದುಬಾಯಿಲ್ಲಿರುವ ಎನ್‌ಆರ್‌ಐ ಮನಿ ಕ್ಲಿನಿಕ್ ಸಂಸ್ಥಾಪಕ ಡಾ ಚಂದ್ರಕಾಂತ ಭಟ್, ಮಂಗಳೂರಿನ ಎಲ್ಕೋಡ್ ಟೆಕ್ನಾಲಜಿಸ್ ಸಂಸ್ಥೆೆಯ ಸಹ ಸಂಸ್ಥಾಪಕ ರಾಜೇಂದ್ರ ಶೆಣೈ, ಮುಂಬಯಿಯ ಕಾಮತ್ ಅವರ ಟೈಮ್‌ಸ್ ಐಸ್ ಕ್ರೀಮ್ ಪ್ರೈ.ಲಿ.ಯ ನಿರ್ದೇಶಕ ಗಿರೀಶ್ ರಮಾನಾಥ ಪೈ, ಗ್ಲೋಬಲ್ ಚೇಂಬರ್ ಆಫ್ ಸಾರಸ್ವತ್ ಎಂಟ್ರಪ್ರೈಸಸ್ ನಿರ್ದೇಶಕಿ ಪ್ರತೀಕ್ಷಾ ಪೈ, ಸತ್ಯಗ್ರೂಪ್ಸ್‌ನ ಸತ್ಯಭಾಮ ಕಾಮತ್, ವಿದ್ಯಾಪೋಷಕ ನಿಧಿ ವಿದ್ಯಾರ್ಥಿ ವೇತನ ಯೋಜನೆಯ ಸಂಯೋಜಕ ವಿಜಯ್ ಕುಮಾರ್ ಶೆಣೈ, ಸಹ ಸಂಯೋಜಕ ಸುಬ್ರಹ್ಮಣ್ಯ ಪ್ರಭು ಉಪಸ್ಥಿತರಿದ್ದರು.
ಉದ್ಯಮಿ ದಿ ರಘುನಂದನ್ ಶ್ರೀನಿವಾಸ್ ಕಾಮತ್ ಅವರಿಗೆ ಶ್ರದ್ಧಾಂಜಲಿ ನೆರವೇರಿಸಲಾಯಿತು. ಬೈಲೂರಿನ ಹೊಸಬೆಳಕು ಸೇವಾ ಟ್ರಸ್ಟ್ ನ ತನುಲಾ ತರುಣ್ ಅವರಿಗೆ 2 ಲಕ್ಷ ರೂ. ದೇಣಿಗೆ ನೀಡಿ ಗೌರವಿಸಲಾಯಿತು. ವಿದ್ಯಾಪೋಷಕ ನಿಧಿ ವಿದ್ಯಾರ್ಥಿ ವೇತನ ಯೋಜನೆಯ ಅಧ್ಯಕ್ಷ ಎಸ್.ಎಸ್.ನಾಯಕ್ ಸ್ವಾಗತಿಸಿ, ವೇದಿಕೆ ಅಧ್ಯಕ್ಷ ಜಿ. ಸತೀಶ್ ಹೆಗ್ಡೆೆ ಕೋಟ ಪ್ರಸ್ತಾವನೆಗೈದರು. ಸಂಯೋಜಕ ಆರ್. ವಿವೇಕಾನಂದ ಶೆಣೈ ವಂದಿಸಿ, ಪ್ರ. ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ನಿರೂಪಿಸಿದರು.