ಹಿರಿಯ ಪತ್ರಕರ್ತ, ಹೊಸದಿಗಂತ ಪತ್ರಿಕೆಯ ಮಂಗಳೂರು ಆವೃತ್ತಿಯ ವಿಶೇಷ ವರದಿಗಾರ ಗುರುವಪ್ಪ ಬಾಳೆಪುಣಿ (62) ಅಲ್ಪಕಾಲದ ಅಸೌಖ್ಯದಿಂದ ಜ. 26ರಂದು ಬಾಳೆಪುಣಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ‘ಬಾಳೇಪುಣಿ’ ಎಂದೇ ಖ್ಯಾತರಾಗಿದ್ದ ಅವರು ಕಳೆದ 26 ವರ್ಷ ಹೊಸದಿಗಂತ ಪತ್ರಿಕೆಯ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಮೊದಲ ಬಾರಿಗೆ ನಾಡಿಗೆ ಪರಿಚಯಿಸಿದ ಕೀರ್ತಿ ಇವರದ್ದು. ರಾಷ್ಟ್ರೀಯ ಮಟ್ಟದ ಸರೋಜಿನಿ ನಾಯ್ಡು ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ರಾಜ್ಯ ಸರ್ಕಾರದ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳಿಗೆ ಬಾಳೇಪುಣಿ ಭಾಜನರಾಗಿದ್ದಾರೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಬಾಳೇಪುಣಿ ಅವರು ಮಂಗಳೂರು ಮಿತ್ರ, ಕರಾವಳಿ ಅಲೆ ಪತ್ರಿಕೆಗಳಲ್ಲಿಯೂ ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದರು. ಅವರು ಪತ್ನಿ, ಪುತ್ರನ ಸಹಿತ ಅಪಾರ ಅಭಿಮಾನಿಗಳು, ಸ್ನೇಹಿತರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.