ಪೆರ್ಲ: ಇತಿಹಾಸ ಪ್ರಸಿದ್ಧ ಶಿವಕ್ಷೇತ್ರವಾದ ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಡೆಸಲು ನಿರ್ಧರಿಸಲಾಗಿದ್ದು, ಈ ಮಹತ್ಕಾರ್ಯಕ್ಕೆ ಧರ್ಮಸ್ಥಳ ಕ್ಷೇತ್ರದಿಂದ ಐದು ಲಕ್ಷ ರೂಗಳ ಧನ ಸಹಾಯದ ನೆರವನ್ನು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಕ್ಷೇತ್ರ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಡಿ.ದಾಮೋದರ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಡಿ.ರಾಜೇಂದ್ರ ರೈ, ಡಿ.ಎನ್.ರಾಧಾಕೃಷ್ಣ ಮೊದಲಾದವರು ಭಾಗವಹಿಸಿದ್ದರು. ದೇಲಂಪಾಡಿ ಕ್ಷೇತ್ರದಲ್ಲಿ ಬ್ರಹ್ಮಶ್ರೀ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಜ.23ಕ್ಕೆ ಅನುಜ್ಞಾ ಕಲಶ ಹಾಗೂ ಬಾಲಲಯ ಪ್ರತಿಷ್ಠೆ ಜರುಗಿ ಪ್ರಧಾನ ಗರ್ಭ ಗುಡಿ, ಶ್ರೀ ಶಾಸ್ತರ ಗುಡಿ, ಹಾಗೂ ನಮಸ್ಕಾರ ಮಂಟಪದ ನವೀಕರಣ ಮತ್ತು ತಾಮ್ರದ ಹೊದಿಕೆ ಹಾಕುವ ಕಾಮಗಾರಿ ನಡೆಯಲಿದೆ. ಮೇ 6ರಿಂದ 11ರ ತನಕ ಬ್ರಹ್ಮಕಲಶೋತ್ಸವ ಜರಗಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.