ನೇಹಾ ಹತ್ಯೆ ಖಂಡಿಸಿ ಬಿಜೆಪಿ ಉಡುಪಿ ನಗರ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆ ಮತ್ತು ಶೃದ್ದಾಂಜಲಿ
ಹುಬ್ಬಳ್ಳಿಯಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ್ ಅಮಾನುಷ ಹತ್ಯೆಗೆ ಫಯಾಜ್ ಅನ್ನುವ ಮತಾಂದ ನೇರ ಹೊಣೆ ಎಂಬುದು ಜಗಜ್ಜಾಹೀರಾಗಿದ್ದರೂ ಕಾಂಗ್ರೆಸ್ ಸರಕಾರ ಕೇವಲ ಮುಸ್ಲಿಂ ಸಮುದಾಯವನ್ನು ಓಲೈಸಲು ಪ್ರಕರಣವನ್ನು ಹಗುರವಾಗಿ ಪರಿಗಣಿಸಿ, ಹತ್ಯೆಗೀಡಾದ ಹೆಣ್ಣು ಮಗಳ ಚಾರಿತ್ರ್ಯಹರಣ ಮಾಡಲು ಮುಂದಾಗಿರುವುದು ಅತ್ಯಂತ ಖಂಡನೀಯ. ಸರಕಾರ ಅಪರಾಧಿಯ ವಿರುದ್ಧ ಶೀಘ್ರ ಕಾನೂನಾತ್ಮಕ ಕ್ರಮವನ್ನು ಜರಗಿಸಿ ಅಪರಾಧಿಗೆ ಗಲ್ಲು ಶಿಕ್ಷೆಯನ್ನು ವಿಧಿಸಬೇಕು ಎಂದು ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ಆಗ್ರಹಿಸಿದ್ದಾರೆ.
ಅವರು ಹುಬ್ಬಳ್ಳಿಯಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ್ ಅಮಾನುಷ ಹತ್ಯೆಯನ್ನು ಖಂಡಿಸಿ ಬಿಜೆಪಿ ಉಡುಪಿ ನಗರ ಮಹಿಳಾ ಮೋರ್ಚಾ ವತಿಯಿಂದ ಮಹಿಳಾ ಮೋರ್ಚಾ ನಗರಾಧ್ಯಕ್ಷೆ ಅಶ್ವಿನಿ ಆರ್. ಶೆಟ್ಟಿ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ಮೊoಬತ್ತಿ ಉರಿಸಿ ನಡೆದ ಶೃದ್ಧಾಂಜಲಿ ಮತ್ತು ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ರಾಜ್ಯ ಕಾಂಗ್ರೆಸ್ ಸರಕಾರದ ಅತಿಯಾದ ಮುಸ್ಲಿo ತುಷ್ಟಿಕರಣವೇ ಇಂತಹ ಘಟನೆಗಳು ನಡೆಯಲು ಮೂಲ ಕಾರಣ. ಕಾಂಗ್ರೆಸ್ ಆಡಳಿತದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬಂತಾಗಿದೆ. ಸ್ವತಃ ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್ ಮಗಳಿಗೆ ನ್ಯಾಯ ಒದಗಿಸಲಾಗದ ಕಾಂಗ್ರೆಸ್ ಸರಕಾರಕ್ಕೆ ನಾಚಿಕೆಯಾಗಬೇಕು. ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ 10 ಸಾವಿರ ಕೋಟಿ ಕೊಡುತ್ತೇನೆ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಭಯೋತ್ಪಾದಕರು, ಬಾಂಬ್ ಇಡುವವರನ್ನು ಅಮಾಯಕರು, ಮೈ ಬ್ರದರ್ಸ್ ಎನ್ನುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೇವಲ ಮುಸ್ಲಿಮರ ಓಟಿನಿಂದ ಗೆದ್ದು ಬಂದಿದ್ದಾರೆಯೇ ಎಂಬ ಬಗ್ಗೆ ಹಿಂದೂ ಸಮುದಾಯ ಗಂಭೀರವಾಗಿ ಆಲೋಚಿಸಿ ಚುನಾವಣೆಯಲ್ಲಿ ಮತ ಚಲಾಯಿಸುವ ಕಾಲ ಸನ್ನಿಹಿತವಾಗಿದೆ ಎಂದರು.
ಗೃಹ ಸಚಿವರಿಗೆ ಕರುಣೆ ಎನ್ನುವ ಸಂವೇದನೆಯೇ ಇಲ್ಲ ಅನ್ನುವುದು ಮತ್ತೊಮ್ಮೆ ಅವರ ಹೇಳಿಕೆಯಿಂದ ಸಾಭೀತಾಗಿದೆ. ಸರಕಾರ ತಕ್ಷಣ ಹೊಲಸು ರಾಜಕೀಯವನ್ನು ಬಿಟ್ಟು ಇಂತಹ ಅಪರಾಧಿಗಳನ್ನು ಗುಂಡಿಟ್ಟು ಕೊಲ್ಲುವ ಕಾನೂನನ್ನು ಜಾರಿಗೆ ತರಬೇಕು. ಇಂತಹ ಘಟನೆಗಳು ಮುಂದೆ ನಡೆಯದಂತೆ ಜಿಹಾದಿಗಳಿಗೆ ಮತ್ತು ಮತಾಂಧರಿಗೆ ಭಯ ಹುಟ್ಟಿಸುವಂತಹ ಕಾರ್ಯಚರಣೆ ನಡೆಸಬೇಕು. ಈ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಮತಾಂಧರ ಅಟ್ಟಹಾಸ, ಡಿಜೆಹಳ್ಳಿ ಕೆಜೆಹಳ್ಳಿಯಲ್ಲಿ ನಡೆದ ಗಲಭೆ, ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅವರು ಅಮಾಯಕರು, ಈ ಸರಕಾರ ಅಲ್ಲಾಹುನ ಕೃಪೆಯಿಂದ ಬಂದಿದೆ, ದೇಶದ ಆಸ್ತಿಯಲ್ಲಿ ಮುಸ್ಲಿಮರಿಗೆ ಮೊದಲ ಪಾಲು ಮುಂತಾದ ಕಾಂಗ್ರೆಸ್ ನಾಯಕರ ಅಸಂಬದ್ಧ ಹೇಳಿಕೆಗಳಿಂದ ಸರಕಾರ ಮತ್ತು ಕಾನೂನಿನ ಯಾವುದೇ ಭಯವಿಲ್ಲದೆ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೆ. ಸರಕಾರ ಎಲ್ಲಾ ಜನಾಂಗದವರನ್ನು ಒಂದೇ ರೀತಿ ಕಾಣಬೇಕು ವಿನಃ ಈ ರೀತಿಯ ತುಷ್ಠಿಕರಣ ನಡೆಸಿದಲ್ಲಿ ಮುಂದೊಂದು ದಿನ ಕರ್ನಾಟಕದಲ್ಲೂ ‘ಕಾಶ್ಮೀರಿ ಫೈಲ್ಸ್’, ‘ಕೇರಳ ಸ್ಟೋರಿ’ ಮಾದರಿಯ ಘಟನೆಗಳು ನಡೆದಲ್ಲಿ ಅದಕ್ಕೆ ಕಾಂಗ್ರೆಸ್ ಪಕ್ಷ ನೇರ ಹೊಣೆಯಾಗಲಿದೆ. ಅಪರಾಧಿ ಮಾದಕ ವ್ಯಸನ ಹೊಂದಿದ್ದಲ್ಲಿ ಅದರ ಹಿಂದಿನ ಜಾಡನ್ನು ಸಂಪೂರ್ಣ ಕಿತ್ತು ಹಾಕುವ ಮೂಲಕ ಕರ್ನಾಟಕದಲ್ಲಿ ಜಿಹಾದಿಗಳ ಹುಟ್ಟಡಗಿಸಲು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಧ್ಯಾ ರಮೇಶ್ ಸರಕಾರವನ್ನು ಅಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಉಡುಪಿ ನಗರ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಸರೋಜ ಶಣೈ, ಶಾಂತಿ ಮನೋಜ್, ಉಪಾಧ್ಯಕ್ಷರುಗಳಾದ ಪೂರ್ಣಿಮಾ ಶೆಟ್ಟಿ, ಮಾಯಾ ಕಾಮತ್, ಯಶೋಧ ರಾಜ್, ಪ್ರಭಾ ರಾವ್, ವಿಧ್ಯಾ ಶಾಮ್ ಸುಂದರ್, ಪ್ರೀತಿ, ದೀಪಾ ಪೈ ಮತ್ತಿತರರು ಉಪಸ್ಥಿತರಿದ್ದರು.