Thursday, April 24, 2025
Homeಬೆಳ್ತಂಗಡಿಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ ಸೂಚಿಸಿದ ಶಾಸಕ ಹರೀಶ್‌ ಪೂಂಜ

ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ ಸೂಚಿಸಿದ ಶಾಸಕ ಹರೀಶ್‌ ಪೂಂಜ

ಬೆಳ್ತಂಗಡಿ: ಮಾಜಿ ಶಾಸಕ ದಿವಂಗತ ವಸಂತ ಬಂಗೇರ ಅವರ ನಿಧನಕ್ಕೆ ವಿಧಾನಸಭೆಯಲ್ಲಿ ಇಂದು ಶಾಸಕ ಹರೀಶ್‌ ಪೂಂಜ ಸಂತಾಪ ಸೂಚಿಸಿದರು. ವಿಧಾನಸಭಾ ಅಧಿವೇಶನದ ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ಸಂದರ್ಭ ಶಾಸಕ ಹರೀಶ್‌ ಪೂಂಜಾ ವಸಂತ ಬಂಗೇರರ ನಿಧನಕ್ಕೆ ಸಂತಾಪ ಸೂಚಿಸಿದರು. ಈ ವೇಳೆ ಅವರು ವಸಂತ ಬಂಗೇರರ ಸಾಧನೆಗಳನ್ನು ವಿಧಾನಸಭೆಯಲ್ಲಿ ಬಣ್ಣಿಸಿದರು.
ವಸಂತ ಬಂಗೇರ ಅವರು ಹಿಂದುಳಿದ ಸಮಾಜ ಮತ್ತು ಇಡೀ ಜಿಲ್ಲೆಗೆ ಆದರ್ಶ ನಾಯಕರು. 1983ರಲ್ಲಿ ವಸಂತ ಬಂಗೇರ ಅವರು ಬಿಜೆಪಿಯಿಂದ ಆಯ್ಕೆಯಾಗಿದ್ದ 18 ಶಾಸಕರಲ್ಲಿ ಒಬ್ಬರಾಗಿದ್ದರು. ಎರಡನೇ ಬಾರಿಗೆ ವಿಧಾನಸಭೆಯಲ್ಲಿ ಬಿಜೆಪಿಯಿಂದ ಇಬ್ಬರೇ ಶಾಸಕರಾಗಿದ್ದಾಗ ವಸಂತ ಬಂಗೇರರು ಬಿಜೆಪಿಯಿಂದ ಆಯ್ಕೆಯಾಗಿದ್ದವರು. ಆಗ ಯಡಿಯೂರಪ್ಪ ಮತ್ತು ಅವರು ಮಾತ್ರ ಬಿಜೆಪಿಯಿಂದ ಶಾಸಕರಾಗಿದ್ದರು ಎಂದು ಹರೀಶ್‌ ಪೂಂಜ ಸ್ಮರಿಸಿದರು.
ಬೆಳ್ತಂಗಡಿಯಲ್ಲಿ ಮಂಗನ ಕಾಯಿಲೆ ವ್ಯಾಪಕವಾಗಿದ್ದಾಗ ಅಲ್ಲಿ ಅದಕ್ಕೆಂದೇ ಆಸ್ಪತ್ರೆ ತೆರೆಸಿ ಮಂಗನ ಕಾಯಿಲೆ ಶಾಶ್ವತವಾಗಿ ನಿವಾರಣೆಗೆ ಕಾರಣರಾದವರು ವಸಂತ ಬಂಗೇರರು. ತುಳುವಿನ ಬಗ್ಗೆ ಅತೀವ ಗೌರವ ಹೊಂದಿದ್ದ ಅವರು ವಿಧಾನಸಭೆಯಲ್ಲಿ ತುಳುವಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ಮೊದಲಿಗರು. ತುಳು ಚಿತ್ರ ನಿರ್ಮಾಣದಲ್ಲೂ ಸೇವೆ ಸಲ್ಲಿಸಿದ್ದರು. ವಿದ್ಯಾರ್ಥಿಗಳ ಸಮಸ್ಯೆ ನಿವಾರಣೆಗೆ ಕಾಲೇಜು ಆರಂಭಿಸಿದರು. ಯುವಕರಿಗೆ ಉದ್ಯೋಗ ಸೃಷ್ಟಿಸಲು ಗುರುದೇವ ಸಹಕಾರಿ ಸಂಘವನ್ನು ತೆರೆದರು ಎಂದು ವಸಂತ ಬಂಗೇರರ ಸಾಧನೆಗಳನ್ನು ಪೂಂಜಾ ಎಳೆಎಳೆಯಾಗಿ ಬಿಡಿಸಿ ಹೇಳಿದರು.
ವಸಂತ ಬಂಗೇರರು ಅಗಲಿರುವುದು ತಾಲೂಕಿನ, ಜಿಲ್ಲೆಯ ಜನತೆಗೆ ಅಪಾರ ನೋವನ್ನುಂಟು ಮಾಡಿದ್ದು, ಅವರ ಬಂಧುಗಳು, ಹಿತೈಷಿಗಳಿಗೆ ಅವರ ಅಗಲುವಿಕೆಯಿಂದಾದ ದುಃಖವನ್ನು ಸಹಿಸುವ ಶಕ್ತಿ ಭಗವಂತ ನೀಡಲಿ ಎಂದು ಪೂಂಜಾ ಹಾರೈಸಿದರು.

RELATED ARTICLES
- Advertisment -
Google search engine

Most Popular