ಲಕ್ನೊ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಿನ್ನೆ ಸಂಜೆ ನಡೆದ ಕಾಲ್ತುಳಿತ ಘಟನೆಯಲ್ಲಿ ಮೃತರಾದವರ ಸಂಖ್ಯೆ 121ಕ್ಕೆ ಏರಿಕೆಯಾಗಿದೆ. ಸರ್ಕಾರಿ ಆಸ್ಪತ್ರೆಯೊಳಗೆ ಐಸ್ ಬ್ಲಾಕ್‌ಗಳ ಮೇಲೆ ಹಲವಾರು ಮೃತದೇಹಗಳು ಬಿದ್ದಿವೆ. ಸಾವನ್ನಪ್ಪಿದವರ ಶವಗಳನ್ನು ಕೊಂಡೊಯ್ಯಲು ಆಸ್ಪತ್ರೆಯ ಹೊರಗೆ ಸಾವಿರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದಾರೆ.
ಬಹುತೇಕ ಶವಗಳನ್ನು ಗುರುತಿಸಲಾಗಿದ್ದು, ಕೆಲವೇ ಶವಗಳು ಮಾತ್ರ ಗುರುತು ಪತ್ತೆಗೆ ಬಾಕಿಯಿವೆ. ಧಾರ್ಮಿಕ ಬೋಧಕ ಭೋಲೆ ಬಾಬಾ ನಾರಾಯಣ ಹರಿ ಅವರ ಸತ್ಸಂಗಕ್ಕಾಗಿ ಸಿಕಂದರಾವು ಪ್ರದೇಶದ ಪುಲ್ರೈ ಗ್ರಾಮದ ಬಳಿ ಸಾವಿರಾರು ಜನರು ನೆರೆದಿದ್ದ ವೇಳೆ ಕಾಲ್ತುಳಿತ ಸಂಭವಿಸಿದೆ.
ಕಾರ್ಯಕ್ರಮದಲ್ಲಿ ಸುಮಾರು 10,000ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು ಎನ್ನಲಾಗಿದೆ. ಸಂಜೆ 3:30ರ ಹೊತ್ತಿಗೆ ಬಾಬಾ ಹೊರಡುವ ವೇಳೆ ಅವರ ಪಾದಗಳನ್ನು ಸ್ಪರ್ಶಿಸಲು ನೂಕು ನುಗ್ಗಲು ಉಂಟಾಗಿದೆ ಎಂದು ತಿಳಿದುಬಂದಿದೆ.
ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಮೃತರ ಸಂಬಂಧಿಕರಿಗೆ 2 ಲಕ್ಷ ರೂ. ಪರಿಹಾರ ಮತ್ತು ಗಾಯಗೊಂಡವರಿಗೆ 50,000 ರೂ. ಪರಿಹಾರ ಘೋಷಿಸಿದ್ದಾರೆ.