ಮಡಿಕೇರಿ: ಕೊಡಗಿನಲ್ಲಿನಡೆದ ಒಂದೇ ಕುಟುಂಬದ ನಾಲ್ವರ ಕೊಲೆ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಕೊಲೆ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ನಾಲ್ವರನ್ನು ಕೊಚ್ಚಿ ಕೊಂದ ಬಳಿಕ ಆರೋಪಿ ಸ್ನಾನ ಮಾಡಿ, ಬಟ್ಟೆ ಬದಲಾಯಿಸಿ, ಶವಗಳ ಜೊತೆ ರಾತ್ರಿ ಕಳೆದು, ಬೆಳಗೆದ್ದು ಬಾಡೂಟ ಮಾಡಿ ನಂತರ ಪರಾರಿಯಾಗಿದ್ದಾನೆ.
ಪತ್ನಿಯ ಅನೈತಿಕ ಸಂಬಂಧಕ್ಕಾಗಿ ಆಕೆ ಮತ್ತು ಆಕೆ ಇಡೀ ಕುಟುಂಬದ ಕಥೆ ಮುಗಿಸಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಮಾ.29 ಶುಕ್ರವಾರ ಒಂದೇ ಕುಟುಂಬದ ನಾಲ್ಕು ಜನರನ್ನು ಕೊಲೆ ಮಾಡಲಾಗಿತ್ತು. ಅಜ್ಜ, ಅಜ್ಜಿ, ಅವರ ಮಗಳು ಮತ್ತು ಮೊಮ್ಮಗಳನ್ನು ಅದೇ ಮನೆಯ ಅಳಿಯ ಕೊಲೆ ಮಾಡಿ ಪರಾರಿಯಾಗಿದ್ದನು. ಕರಿಯ (75), ಗೌರಿ (70), ನಾಗಿ (35), ಕಾವೇರಿ (7) ಕೊಲೆಯಾದವರು. ಗಿರೀಶ್ (35) ಕೊಲೆ ಮಾಡಿದ್ದ ಆರೋಪಿ. ಈ ಪ್ರಕರಣದ ಬೆನ್ನು ಬಿದ್ದ ಕೊಡಗು ಪೊಲೀಸರು ಮಾ.29 ರಾತ್ರಿಯೇ ಆರೋಪಿಯ ಎಡೆಮುರಿ ಕಟ್ಟಿ ಎಳೆದು ತಂದಿದ್ದಾರೆ.
ಕೊಲೆಯಾದ ಕರಿಯ ಮತ್ತು ಗೌರಿಗೆ ದಂಪತಿಗೆ ಇಬ್ಬರು ಮಕ್ಕಳು. ಮೊದಲನೇ ಮಗಳೇ ನಾಗಿ. ಮತ್ತೊಬ್ಬಳು ಜಯ. ನಾಗಿ ಕೆಲ ವರ್ಷಗಳ ಹಿಂದೆ ಒಬ್ಬನನ್ನು ವಿವಾಹವಾಗಿ ಆತನನ್ನು ಬಿಟ್ಟಿದ್ದಳಂತೆ. ಬಳಿಕ ಸುಬ್ರಮಣಿ ಎಂಬವರ ಜೊತೆ ಎರಡನೇ ವಿವಾಹವಾಗಿದ್ದರು. ಮೊದಲ ಪತಿಗೆ ಜನಿಸಿದ್ದವಳೇ ಮಗಳು ಕಾವೇರಿ. ಈ ಆದಿವಾಸಿಗಳಲ್ಲಿ ಮಹಿಳೆಯರು ಗಂಡನನ್ನ ಬದಲಾಯಿಸುವ ಪದ್ಧತಿ ಇದೆಯಂತೆ. ಈಗಿರುವ ಗಂಡ ಇಷ್ಟ ಆಗಲಿಲ್ಲ ಅಂದ್ರೆ ಮತ್ತೊಬ್ಬನನ್ನು ವರಿಸಿ ಆತನೊಂದಿಗೆ ಸಂಸಾರ ಮಾಡುವ ಪದ್ಧತಿ ಇದೆ ಅಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ತಿಳಿಸಿದ್ದಾರೆ. ಹೀಗಾಗಿ, ನಾಗಿ ಅದಾಗಲೇ ಮೂರನೇ ಮದುವೆಯಾಗಿದ್ದರು.
ಒಂದು ಒಂದೂವರೆ ವರ್ಷದ ಹಿಂದೆ ನಾಗಿ ಮತ್ತು ಸುಬ್ರಮಣಿ ಮಧ್ಯೆ ಗಿರೀಶ್ ಬಂದ ಅಂತ ಹೇಳಲಾಗುತ್ತೆ. ಈ ಗಿರೀಶ್ ಮೂಲತಃ ಕೇರಳದವರು. ಅಲ್ಲಿ, ಆತನಿಗೆ ವಿವಾಹವಾಗಿ ಐದು ಮಕ್ಕಳು ಇದ್ದಾರೆ. ಕೆಲಸಕ್ಕೆ ಅಂತ ಬಂದವನು ಇಲ್ಲಿ ನಾಗಿ ಜೊತೆ ಸ್ನೇಹ ಬೆಳೆಸಿದ್ದಾರೆ. ಸ್ನೇಹ ಪ್ರೇಮಕ್ಕೆ ತಿರುಗಿತು ಅಂತ ಹೇಳಲಾಗುತ್ತೆ. ಹೀಗಾಗಿ ಈ ವಿಚಾರದಲ್ಲಿ ಸುಬ್ರಮಣಿ ಕೋಪಗೊಂಡು ಪತ್ನಿ ನಾಗಿಯನ್ನು ತ್ಯಜಿಸಿ ಬೇರೆ ಕಡೆ ಹೋಗಿ ನೆಲೆಸಿದ್ದಾನೆ.
ಪತಿ ತನ್ನನ್ನು ಬಿಟ್ಟು ಹೋದ ಬಳಿಕ ನಾಗಿ ಮತ್ತು ಗಿರೀಶ, ಜೊತೆಗೆ ಮಗಳು ಕಾವೇರಿ ಹಾಗೂ ತಂದೆ ಕರಿಯ ಮತ್ತು ತಾಯಿ ಗೌರಿ ಜೊತೆ ಈ ಜೋಪಡಿ ಮನೆಯಲ್ಲಿ ವಾಸವಾಗಿದ್ದಾಳೆ. ನಾಗಿ ಮತ್ತೆ ಗಿರೀಶ್ ನಡುವೆ ಆಗಾಗ ಜಗಳವಾಗುತ್ತಿತ್ತಂತೆ.
ಶುಕ್ರವಾರ ಈ ನಾಲ್ವರ ಹೆಣ ದಾರುಣವಾಗಿ ಉರುಳಿ ಬಿದ್ದಿತ್ತು. ಹೀಗಾಗಿ, ಗಿರೀಶನ ಮೇಲೆ ಅನುಮಾನಗೊಂಡ ಪೊಲೀಸರು ಬಂಧನಕ್ಕೆ ಬಲೆ ಬೀಸುತ್ತಾರೆ. ಪ್ರಾಥಮಿಕ ತನಿಕೆಯಲ್ಲಿ ಗಿರೀಶ್ ಕೇರಳಕ್ಕೆ ಪರಾರಿಯಾಗಿರೋ ಮಾಹಿತಿ ಸಿಗುತ್ತೆ. ಆ ಪ್ರಕಾರ ತಕ್ಷಣವೇ ಒಂದು ಪೊಲೀಸ್ ತಂಡ ಕೇರಳದ ವಯನಾಡು ಜಿಲ್ಲೆಗೆ ತೆರಳುತ್ತದೆ. ಕೇರಳ ಪೊಲೀಸರ ಸಹಾಯ ಪಡೆದ ಕೊಡಗು ಪೊಲೀಸರು ಗಿರೀಶನನ್ನು ಅದೇ ದಿನ ಸಂಜೆ ಬಂಧಸಿದ್ದಾರೆ. ಕೇರಳದಲ್ಲೂ ಕೂಡ ಗಿರೀಶ್ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.
ಆತನ ಬಂಧನದ ಬಳಿಕ ವಿಚಾರಣೆ ಮಾಡಿದಾಗ ಕೊನೆಗೆ ಆತ ಹೇಳಿದ ಕಾರಣ ಕೇಳಿ ಸ್ವತಃ ಪೊಲೀಸರೇ ಶಾಕ್ ಆಗಿದ್ದಾರೆ. “ಪತ್ನಿ ನಾಗಿ ಆಕೆಯ ಎರಡನೆಯ ಪತಿ ಸುಭ್ರಮಣಿ ಜೊತೆ ಅಕ್ರಮ ಸಂಬಂಧ ಹೊಂದಿದಳು” ಎಂಬುವುದು ಈತನ ಕೋಪಕ್ಕೆ ಕಾರಣ ಆಗಿತ್ತು.
ಕೊಲೆ ಮಾಡಿರುವುದನ್ನು ಸದ್ಯ ಗಿರೀಶ್ ಒಪ್ಪಿಕೊಂಡಿದ್ದಾನೆ. ಆದರೆ ವಿಚಿತ್ರ ಅಂದ್ರೆ ಕೊಲೆಯ ಬಳಿಕ ಆತನಿಗೆ ಯಾವುದೇ ಪಶ್ಚಾತಾಪದ ಭಾವನೆ ಇಲ್ಲ. ಎಲ್ಲರನ್ನು ಕೊಚ್ಚಿ ಕೊಂದ ಬಳಿಕ ಅಲ್ಲೇ ಬಟ್ಟೆ ಬದಲಾಯಿಸಿ, ಸ್ನಾನ ಮಾಡಿ ಬೇರೆ ಕಡೆ ಮಲಗಿದ್ದು, ಬೆಳಗ್ಗೆ ಎದ್ದು ಹೋಗಿದ್ದಾನೆ. ಹೋಗುವಾಗ ಶೇವಿಂಗ್ ಮಾಡಿ ಮಾಂಸದೂಟ ಮಾಡಿ, ನಂತರ ಕೇರಳಕ್ಕೆ ಪರಾರಿಯಾಗಿದ್ದನು.