ಮಂಗಳೂರು: ತುಳುನಾಡಿನಾದ್ಯಂತ ಇಂದು ಧಾರಾಕಾರ ಮಳೆ ಸುರಿದು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಆಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಿವಿಧೆಡೆ ತೀವ್ರ ಮಳೆ ಸುರಿದಿದೆ. ಬಹುತೇಕ ನದಿಗಳು ತುಂಬಿ ಹರಿಯುತ್ತಿವೆ. ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ಮನೆಗಳು ಜಲಾವೃತಗೊಂಡಿವೆ. ಮಳೆಯ ಕಾರಣ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂದು ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.
ಉಡುಪಿ ಜಿಲ್ಲೆಯ ಸೌಪರ್ಣಿಕಾ ನದಿ ಮೈದುಂಬಿದೆ. ಬೈಂದೂರು ತಾಲೂಕಿನ ನಾವುಂದ ಬಡಾಕೆರೆ ಜಲಾವೃತವಾಗಿದೆ. ವಿವಿಧೆಡೆ 100ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲೂ ಭಾರೀ ಮಳೆಯಾಗಿ ಎಲ್ಲೆಡೆ ನೀರು ಆವರಿಸಿದೆ. ಉತ್ತರ ಕನ್ನಡದಲ್ಲೂ ಭಾರೀ ಮಳೆಯಾಗಿದ್ದು, ಹಲವು ಮನೆಗಳು ಜಲಾವೃತಗೊಂಡಿವೆ.