ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಹೆಬ್ರಿ ತಾಲೂಕಿನ ಕಬ್ವಿನಾಲೆಯ ಸೀತಂಬೈಲುವಿನಲ್ಲಿ ನವೆಂಬರ್ 18 ರಾತ್ರಿ ಎ ಎನ್ ಎಫ್ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಹತನಾಗಿದ್ದಾನೆ. ಕಾರ್ಕಳ, ಹೆಬ್ರಿ ಪರಿಸರದಲ್ಲಿ ಕೆಲದಿನಗಳಿಂದ ನಕ್ಸಲ್ ಓಡಾಟ ಗಮನಸೆಳೆದಿತ್ತು.
ಹೀಗಾಗಿ, ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್) ಕೂಂಬಿಂಗ್ ತೀವ್ರಗೊಳಿಸಿತ್ತು. ಸೋಮವಾರ (ನವೆಂಬರ್ 18) ರಾತ್ರಿ ಸೀತಂಬೈಲು ಸಮೀಪ 5 ಮಂದಿ ನಕ್ಸಲರ ತಂಡ ರೇಷನ್ ಸಂಗ್ರಹಕ್ಕೆ ಬಂದಾಗ ನಕ್ಸಲ್ ನಿಗ್ರಹ ಪಡೆಗೆ ಎದುರಾಗಿದೆ. ಈ ವೇಳೆ ನಡೆದ ದಾಳಿ- ಪ್ರತಿದಾಳಿಯಲ್ಲಿ ವಿಕ್ರಂ ಗೌಡ ಹತನಾಗಿದ್ದಾನೆ. ಉಳಿದ ನಾಲ್ವರು ಕಾಡಿನ ಹಾದಿಯಲ್ಲಿ ಪರಾರಿಯಾಗಿದ್ದು, ಅವರ ಪತ್ತೆಗೆ ಶೋಧ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ, ಅಧಿಕೃತ ಹೇಳಿಕೆ ಇನ್ನೂ ಪ್ರಕಟವಾಗಿಲ್ಲ.
ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್‌ಗೆ ಬಲಿ
ನಕ್ಸಲ್ ನಾಯಕ ವಿಕ್ರಂ ಗೌಡ ಕಬ್ಬಿನಾಲೆ ಮೂಲದವನಾಗಿದ್ದು, ಅದೇ ಭಾಗದಲ್ಲಿದ್ದುಕೊಂಡು ಕಳೆದ ಕೆಲವು ದಿನಗಳಿಂದ ಚಟುವಟಿಕೆ ಮುಂದುವರಿಸಿದ್ದ. ವಿಕ್ರಂ ಗೌಡ ಮತ್ತು ಆತನ ತಂಡ ಕಬ್ಬಿನಾಲೆ ಆಸುಪಾಸಿನಲ್ಲಿರುವ ಖಚಿತ ಮಾಹಿತಿ ಸಿಕ್ಕ ಕಾರಣ ನಕ್ಸಲ್ ನಿಗ್ರಹ ಪಡೆ ತನ್ನ ಕಾರ್ಯಾಚರಣೆ ತೀವ್ರಗೊಳಿಸಿತ್ತು. ಇದೇ ವೇಳೆ ದಿನಸಿಗೆಂದು ಬಂದ ತಂಡಕ್ಕೆ ನಕ್ಸಲ್ ನಿಗ್ರಹ ಪಡೆ ಎದುರಾಗಿದ್ದು, ದಾಳಿ ಪ್ರತಿದಾಳಿ ನಡೆದಿತ್ತು. ಈ ಸಂಘರ್ಷದಲ್ಲಿ ವಿಕ್ರಂ ಗೌಡ ಹತನಾಗಿದ್ದಾನೆ.
ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಪ್ರತಿಭಟನೆ ಶುರುವಾದ ಬೆನ್ನಿಗೆ ನಕ್ಸಲ್ ಚಟುವಟಿಕೆ ಹೆಚ್ಚಾಗಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಭಾಗದಲ್ಲಿ ಈ ಚಟುವಟಿಕೆ ಕಾಣಿಸಿಕೊಂಡಿದ್ದು, ನಕ್ಸಲ್ ನಿಗ್ರಹ ಪಡೆ ತನ್ನ ಕಾರ್ಯಾಚರಣೆಯನ್ನು ಚುರುಕುಗೊಳಿಸಿತ್ತು.
ಈದು ಎನ್‌ಕೌಂಟರ್ ನಡೆದು 21 ವರ್ಷ
ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮೊದಲ ನಕ್ಸಲ್ ಎನ್‌ಕೌಂಟರ್ ಪ್ರಕರಣ ಕಾರ್ಕಳದ ಈದು ಗ್ರಾಮದಲ್ಲಿ ನಡೆದು ನವೆಂಬರ್ 17ಕ್ಕೆ 21 ವರ್ಷಗಳು ಆಗಿದ್ದವು. ನಕ್ಸಲ್‌ಪೀಡಿತ ಪ್ರದೇಶ ಎನ್ನುವ ಹಣೆಪಟ್ಟಿ ಹೊಂದಿರುವ ಈ ಗ್ರಾಮದ ಅಭಿವೃದ್ಧಿ ಬಗ್ಗೆ ಸರ್ಕಾರ ಇನ್ನೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪವಿದೆ. ಈದು ಗ್ರಾಮದ ಬೊಳ್ಳೆಟ್ಟು ರಾಮಪ್ಪ ಪೂಜಾರಿ ಮನೆಯಲ್ಲಿ ಅಡಗಿದ್ದ ಐವರು ಶಸ್ತ್ರಸಜ್ಜಿತ ನಕ್ಸಲ್ ತಂಡ 2003ರ ನವೆಂಬರ್ 16ರ ರಾತ್ರಿ ಅವರ ಮನೆಗೆ ಬಂದಿತ್ತು. ನ.16ರ ರಾತ್ರಿ ಊಟ ಮುಗಿಸಿದ ನಕ್ಸಲರು ಮನೆಯ ಚಾವಡಿಯಲ್ಲಿ ನಾಲ್ವರೂ ಮಲಗಿದ್ದರು. ಮನೆಯ ಹೊರಗೆ ಓರ್ವ ನಕ್ಸಲ್ ಸರತಿಯಂತೆ ಗಂಟೆಗೊಮ್ಮೆ ಒಬ್ಬರು ಗಸ್ತು ತಿರುಗುತ್ತಿದ್ದರು. ನಕ್ಸಲರ ಚಲನವಲನಗಳ ಮಾಹಿತಿಯಿದ್ದ ಪೊಲೀಸರ ತಂಡ ಉಡುಪಿ ಎಸ್ಪಿಯಾಗಿದ್ದ ಮುರುಗನ್ ನೇತೃತ್ವದಲ್ಲಿ ನ.17ರ ಮುಂಜಾನೆ ನಾಲ್ಕು ಗಂಟೆಗೆ ಮನೆ ಎದುರು ನೆಟ್ಟಿದ್ದ ಹುಲ್ಲು ರಾಶಿಯ ಒಳಗಿನಿಂದ ಗಸ್ತು ತಿರುಗುತಿದ್ದ ನಕ್ಸಲ್ ಪಾರ್ವತಿಯ ಕುತ್ತಿಗೆಗೆ ಬಂದೂಕಿನಿಂದ ಗುಂಡು ಹಾರಿಸಿತ್ತು. ನಕ್ಸಲ್ ಪಾರ್ವತಿ ಗಾಯಗೊಂಡು ಚಾವಡಿಯಲ್ಲಿ ಮಲಗಿದ್ದ ನಾಲ್ವರನ್ನು ಓಡುವಂತೆ ಸೂಚಿಸಿ ಸಾವಿಗೀಡಾಗಿದ್ದಳು. ಮನೆಯೊಳಗಿನ ಲೈಟ್ ಹಾಕುತ್ತಿದ್ದಂತೆ ನಕ್ಸಲ್ ಆನಂದ ಹಾಗೂ ವೇಣು ಮನೆಯ ಹಿಂಬಾಗಿಲಿನಿಂದ ಕಾಡಿನತ್ತ ಓಡಿದ್ದರು. ಒಳಗಿದ್ದ ನಕ್ಸಲ್ ಹಾಜೀಮಾ ಪೊಲೀಸರ ಗುಂಡೇಟಿಗೆ ಆಸ್ಪತ್ರೆ ಸಾಗಿಸುವ ವೇಳೆ ಮೃತಪಟ್ಟಿದ್ದು, ಅಡಗಿ ಕುಳಿತಿದ್ದ ನಕ್ಸಲ್ ಯಶೋದಾ ಗುಂಡು ತಗುಲಿ ಮನೆಯ ಮೇಲ್ಬಾಗದಲ್ಲಿ ಪೊಲೀಸರ ಕೈಗೆ ಸೆರೆ ಸಿಕ್ಕಿದ್ದಳು. ಈ ಸುದ್ದಿ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.
ಮತ್ತೆ ನಕ್ಸಲ್ ಹೆಜ್ಜೆ: ಮೂಲತಃ ಹೆಬ್ರಿಯವನಾದ ವಿಕ್ರಮ್ ಗೌಡ ಇದೇ ಪರಿಸರದಲ್ಲಿ ಕಳೆದೊಂದು ವರ್ಷದಿಂದ ಓಡಾಡುತ್ತಿರುವ ಕುರಿತು ಮಾಹಿತಿ ಪಡೆದಿದ್ದ ಪೊಲೀಸರು ಆತನ ಹಿಂದೆ ಬಿದ್ದಿದ್ದರು. ನಕ್ಸಲ್ ನಾಯಕಿ ಮಂಡಗಾರು ಲತಾ ಮತ್ತು ಜಯಣ್ಣ ಅವರ ತಂಡ ಕಳೆದ ಹದಿನೈದು ದಿನಗಳಿಂದ ಕೊಪ್ಪ ಮತ್ತು ಶೃಂಗೇರಿ ಗಡಿ ಭಾಗದಲ್ಲಿ ತಿರುಗಾಟ ನಡೆಸುತ್ತಿರುವ ಕುರಿತು ಮಾಹಿತಿ ಆಧರಿಸಿ ಎಎನ್ ಎಫ್ ಕೂಂಬಿಂಗ್ ಚುರುಕುಗೊಳಿಸಿದ್ದರು.
ವಿಕ್ರಂ ಗೌಡ ನಕ್ಸಲರ ನೇತ್ರಾವತಿ ದಳದ ನಾಯಕ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ. ಆ ಸಂದರ್ಭದಲ್ಲಿ ನಕ್ಸಲ್ ಚಳವಳಿಗೆ ಧುಮುಕಿದ್ದ ವಿಕ್ರಂ ಗೌಡ, ನಂತರದಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ನಕ್ಸಲ್ ಹೋರಾಟದ ವೇಳೆ ಕರಾವಳಿ ಭಾಗದಲ್ಲಿ ನೇತ್ರಾವತಿ ದಳವನ್ನು ಮುನ್ನೆಡೆಸಿದ್ದ. ಮಲೆನಾಡು ಭಾಗದಲ್ಲಿ ಮುಂಡಗಾರು ಲತಾ ತಂಡ ಸಕ್ರಿಯವಾಗಿತ್ತು.