ಹೆಬ್ರಿ : ತಾಲ್ಲೂಕಿನ ಗ್ರಾಮ ಆಡಳಿತಾಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ತಾಲ್ಲೂಕು ಕಚೇರಿ ಬಳಿ ಸೋಮವಾರದಿಂದ ಪ್ರತಿಭಟನೆ ಆರಂಭಿಸಿದ್ದಾರೆ. ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ನಿರ್ದೇಶನದಂತೆ ಹೆಬ್ರಿ ತಾಲ್ಲೂಕಿನ ಗ್ರಾಮ ಆಡಳಿತಾಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ 2 ನೇ ಹಂತದಲ್ಲಿ ತಾಲ್ಲೂಕು ಕಚೇರಿ ಬಳಿ ಸೋಮವಾರದಿಂದ ಕರ್ತವ್ಯ ನಿರ್ವಹಿಸದೆ ಮುಷ್ಕರ ಮುಷ್ಕರ ಆರಂಭಿಸಿದ್ದಾರೆ.
ಮಾತೃ ಇಲಾಖೆಯಾಗಿರುವ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳಿಗೆ ಅಗತ್ಯ ಮೂಲ ಸೌಕರ್ಯಗಳಾದ ಸುಸಜ್ಜಿತ ಕಚೇರಿ ನೀಡುವುದು, ಉತ್ತಮ ಗುಣಮಟ್ಟದ ಪೀಠೋಪಕರಣಗಳಾದ ಟೇಬಲ್, ಕುರ್ಚಿ, ಅಲ್ಮೆರಾ, ಉತ್ತಮ ಗುಣಮಟ್ಟದ ಮೊಬೈಲ್ ಪೋನ್, ಗೂಗಲ್ ಕ್ರೋಮ್ ಬುಕ್, ಲ್ಯಾಪ್ ಟಾಪ್, ಪ್ರಿಂಟರ್ ಮತ್ತು ಸ್ಕ್ಯಾನರ್ ನೀಡುವುದು, ಸೇವಾ ವಿಷಯಗಳಿಗೆ ವಿವಿಧ ಸೌಲಭ್ಯ ಕಲ್ಪಿಸುವುದು. ಕಳೆದ 30 ವರ್ಷಗಳಿಂದ ಪದೋನ್ನತಿ ನೀಡದೆ ನಿವೃತ್ತಿಯ ಅಂಚಿನಲ್ಲಿ ನೀಡುತ್ತಿದ್ದು ಇದರಿಂದ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವುದು, ಎಲ್ಲಾ ವರ್ಚುವಲ್ ಸಭೆಯನ್ನು ನಿಷೇಧಿಸುವುದು, ಆಪತ್ತಿನ ಭತ್ಯೆ ನೀಡುವುದು, 3 ವರ್ಷಗಳ ಸೇವೆಯನ್ನು ಪರಿಗಣಿಸಿ ಅಂತರ್ ಜಿಲ್ಲಾ ವರ್ಗಾವಣೆಗಾಗಿ ಹೊಸ ಮಾರ್ಗಸೂಚಿನ ರಚನೆ ಸೇರಿ ಹಲವು ಬೇಡಿಕೆಯನ್ನು ಮುಂದಿಟ್ಟು ಮುಷ್ಕರ ನಡೆಯುತ್ತಿದೆ.
ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಹೆಬ್ರಿ ತಾಲ್ಲೂಕು ಘಟಕದ ಅಧ್ಯಕ್ಷ ಗಣೇಶ್ ನೇತ್ರತ್ವದಲ್ಲಿ ಮುಷ್ಕರ ನಡೆಯುತ್ತಿದ್ದು ಉಪಾಧ್ಯಕ್ಷ ರಾಚಪ್ಪಜೀ, ಕಾರ್ಯದರ್ಶಿ ನವೀನ್ ಕುಮಾರ್ ಹಾಗೂ ಹೆಬ್ರಿ ತಾಲ್ಲೂಕಿನ ಗ್ರಾಮ ಆಡಳಿತಾಧಿಕಾರಿಗಳು ಭಾಗವಹಿಸಿದ್ದಾರೆ.