ನವದೆಹಲಿ: ಡಿಜಿಟಲ್ ತಂತ್ರಜ್ಞಾನ ಹೆಚ್ಚು ಹೆಚ್ಚು ಬೆಳೆಯುತ್ತಿದ್ದಂತೆ ಅದರ ದುರುಪಯೋಗವೂ ಹೆಚ್ಚಾಗುತ್ತಿದೆ. ಒಳ್ಳೆಯ ಉದ್ದೇಶಕ್ಕೆ ಬಳಕೆಯಾಗಬೇಕಾಗಿದ್ದ ತಂತ್ರಜ್ಞಾನ ಹಲವು ಬಾರಿ ಕೆಟ್ಟ ಉದ್ದೇಶಗಳಿಗೆ ಬಳಕೆಯಾಗುತ್ತಿರುವುದು ಹೆಚ್ಚುತ್ತಿದೆ. ಹೋಟೆಲ್ ರೂಮ್, ಸಾರ್ವಜನಿಕ ವಿಶ್ರಾಂತಿ ಸ್ಥಳಗಳಲ್ಲಿ ಹಿಡನ್ ಕ್ಯಾಮೆರಾಗಳನ್ನು ಇಟ್ಟಿರುವ ಸುದ್ದಿಗಳನ್ನು ಕೇಳುತ್ತಿದ್ದೆವು. ಇದೀಗ ಮನೆ ಮಾಲೀಕನೊಬ್ಬ ಬಾಡಿಗೆ ಮನೆಯಲ್ಲಿ ಸ್ಪೈ ಕ್ಯಾಮೆರಾ ಬಳಸಿ ವಿಶ್ವಾಸದ್ರೋಹ ಎಸಗಿದ್ದಾನೆ. ದೆಹಲಿಯಲ್ಲಿ ಮನೆ ಬಾಡಿಗೆಗೆ ನೀಡಿದ್ದ ಮಾಲೀಕನೊಬ್ಬ ಮನೆಯಲ್ಲಿ ಸ್ಪೈ ಕ್ಯಾಮೆರಾ ಬಳಸಿ ಸಿಕ್ಕಿಬಿದ್ದಿದ್ದಾನೆ. ಅದೂ ಯುಪಿಎಸ್ಸಿ ಆಕಾಂಕ್ಷಿ ಯುವತಿಗೆ ಮನೆ ಬಾಡಿಗೆ ನೀಡಿದ್ದ ಕಿರಾತಕ ಅವರಿಗೆ ಗೊತ್ತಿಲ್ಲದಂತೆ ಹಿಡನ್ ಕ್ಯಾಮೆರಾ ಬಳಸಿದ್ದಾನೆ.
ಬಾಡಿಗೆಗೆ ಇದ್ದ ಯುವತಿ ಊರಿಗೆ ಹೋಗಬೇಕಾದ ಸಂದರ್ಭದಲ್ಲಿ ಮನೆ ಕೀ ಮನೆ ಮಾಲೀಕನಿಗೆ ಕೊಟ್ಟು ಹೋಗುತ್ತಿದ್ದಳು. ಆ ಯುವತಿಯ ನಂಬಿಕೆಯನ್ನೇ ದುರುಪಯೋಗಪಡಿಸಿಕೊಂಡ ಮಾಲೀಕ ಆಕೆಯ ಮಲಗುವ ಕೋಣೆ, ಸ್ನಾನದ ಕೋಣೆ, ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿದ್ದಾನೆ.
ಕ್ಯಾಮೆರಾ ಇಟ್ಟ ಮನೆ ಮಾಲೀಕ ಆ ಮನೆಯಲ್ಲಿ ಸಣ್ಣ ಪುಟ್ಟ ರಿಪೇರಿ ನೆಪದಲ್ಲಿ ಆ ಯುವತಿಯ ಮನೆಗೆ ಹೋಗಿ ಕ್ಯಾಮೆರಾದ ಡೇಟಾವನ್ನೂ ಹೊರ ತೆಗೆದಿದ್ದಾನೆ. ಇದೇ ರೀತಿ ಪದೇ ಪದೇ ಮನೆ ಕೀಗಾಗಿ ಯುವತಿ ಮೇಲೆ ಒತ್ತಡ ಹೇರಿದ್ದಕ್ಕೆ ಅನುಮಾನಗೊಂಡ ಯುವತಿ ತನ್ನ ಮನೆಯನ್ನು ಪರಿಶೀಲಿಸಿದ್ದಾಳೆ. ಆಗ ಬಲ್ಬ್ನ ಹೋಲ್ಡರ್ನಲ್ಲಿ ಕ್ಯಾಮೆರಾ ಇಟ್ಟಿರುವುದು ಪತ್ತೆಯಾಗಿದೆ.
ತಕ್ಷಣವೇ ಆಕೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು 30 ವರ್ಷದ ಮನೆ ಮಾಲೀಕ ಕರಣ್ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪರಿಶೀಲನೆ ವೇಳೆ 3 ಹಿಡನ್ ಕ್ಯಾಮೆರಾ ಪತ್ತೆಯಾಗಿದ್ದು, ಯಾವುದೇ ಕ್ಯಾಮೆರಾ ನೆಟ್ವರ್ಕ್ಗೆ ಅಳವಡಿಸಿರಲಿಲ್ಲ. ಬದಲಿಗೆ ಮೆಮೋರಿ ಕಾರ್ಡ್ನಲ್ಲಿ ಡೇಟಾ ಸಂಗ್ರಹಿಸಲಾಗುತ್ತಿತ್ತು. ಹಿಡನ್ ಕ್ಯಾಮೆರಾ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
