ಬೆಂಗಳೂರು: ಮತದಾನ ಮಾಡಿ ಬಂದವರು ಅದಕ್ಕೆ ಸಂಬಂಧಿಸಿದ ಸಾಕ್ಷಿ ತೋರಿಸಿದರೆ ಉಚಿತವಾಗಿ ಆಹಾರ ನೀಡಲು ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಸದಸ್ಯರಿಗೆ ಹೈಕೋರ್ಟ್ ಅನುಮತಿ ನೀಡಿದೆ. ಈ ವಿಚಾರವಾಗಿ ಮಂಗಳವಾರ ಮಧ್ಯಂತರ ಆದೇಶ ಹೊರಬಿದ್ದಿದೆ. ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಬೆಂಗಳೂರಿನ ಕೆಲವು ಹೋಟೆಲ್ ಗಳು ಕಳೆದ ವರ್ಷ ವಿಧಾನಸಭೆ ಚುನಾವಣೆಯ ವೇಳೆಯೂ ಇದೇ ರೀತಿಯ ಪ್ರಯತ್ನ ಮಾಡಿದ್ದವು. ನ್ಯಾ. ಎಂ. ನಾಗಪ್ರಸನ್ನ ಅವರ ನ್ಯಾಯಪೀಠವು ಈ ಮಧ್ಯಂತರ ಆದೇಶ ನೀಡಿದ್ದಾರೆ. ಹೋಟೆಲ್ ಗಳ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲಾಗಿತ್ತು. ಮಾದರಿ ನೀತಿ ಸಂಹಿತೆ ಉಲ್ಲಂಘಿಸಬಾರದು ಎಂಬ ಷರತ್ತಿನೊಂದಿಗೆ ಅರ್ಜಿದಾರರು ಮತ್ತು ಅದರ ಸದಸ್ಯರಿಗೆ ಏ. 26ರಂದು ಮತದಾರರಿಗೆ ಬೆಂಗಳೂರಿನಲ್ಲಿ ಉಚಿತ ಆಹಾರ ವಿತರಿಸಲು ಅನುಮತಿ ನೀಡಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.